ಮಾಪುಟೊ ,ಮೊಜಾಂಬಿಕ್: ಮೊಜಾಂಬಿಕದಲ್ಲಿ ಚಿಡೋ ಚಂಡಮಾರುತದಿಂದ ಸಾವನ್ನಪ್ಪಿದವರ ಸಂಖ್ಯೆ 73 ಕ್ಕೆ ಏರಿದೆ ಎಂದು ರಾಷ್ಟ್ರೀಯ ಅಪಾಯ ಮತ್ತು ವಿಪತ್ತು ನಿರ್ವಹಣೆ ಸಂಸ್ಥೆ ತಿಳಿಸಿದೆ.
ಉತ್ತರ ಕ್ಯಾಬೊ ಡೆಲ್ಗಾಡೊ ಪ್ರಾಂತ್ಯದಲ್ಲಿ ಕನಿಷ್ಠ 66 ಸಾವುಗಳು ಸಂಭವಿಸಿವೆ ಎಂದು ವಿಪತ್ತು ಕೇಂದ್ರ ಗುರುವಾರ ಮಾಹಿತಿ ನೀಡಿದೆ. ನಾಂಪುಲಾ ಪ್ರಾಂತ್ಯದಲ್ಲಿ ನಾಲ್ವರು ಮತ್ತು ಒಳನಾಡಿನ ನಿಯಾಸ್ಸಾದಲ್ಲಿ ಮೂವರು ಸಾವನ್ನಪ್ಪಿದ್ದಾರೆ, ಒಬ್ಬ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ಅದು ಹೇಳಿದೆ.
ಚಂಡಮಾರುತದಿಂದ 540 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಂಟೆಗೆ ಸರಿಸುಮಾರು 260 ಕಿಮೀ ವೇಗದ ಗಾಳಿ ಬೀಸುತ್ತಿದ್ದು, 24 ಗಂಟೆಗಳಲ್ಲಿ ಸುಮಾರು 250 ಮಿಮೀ ಭಾರೀ ಮಳೆಯನ್ನು ಸುರಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.
3 ಲಕ್ಷಕ್ಕೂ ಹೆಚ್ಚು ಮಂದಿಗೆ ಸಂಕಷ್ಟ: ವಿನಾಶಕಾರಿ ಭಾರಿ ಚಂಡಮಾರುತದಿಂದಾಗಿ 39,100 ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ ಮತ್ತು 13,400 ಕ್ಕೂ ಹೆಚ್ಚು ಮನೆಗಳು ಭಾಗಶಃ ನಾಶವಾಗಿವೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. 3,29,500 ಕ್ಕೂ ಹೆಚ್ಚು ಜನರು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮೊಜಾಂಬಿಕ್‌ನ ವಿಪತ್ತು ಕೇಂದ್ರ ತಿಳಿಸಿದೆ. ಉತ್ತರ ಮೊಜಾಂಬಿಕ್‌ನ ಒಂದು ಭಾಗವನ್ನು ಚಿಡೋ ಇನ್ನಿಲ್ಲದಂತೆ ಕಾಡಿದ್ದು, ಇಲ್ಲಿನ ಜನಜೀವನ ತೀವ್ರ ಅಸ್ತವ್ಯಸ್ತಗೊಂಡಿದೆ. ಈ ಪ್ರದೇಶದಲ್ಲಿ ಆಗಾಗ್ಗೆ ಚಂಡಮಾರುತಗಳು ಇಂತಹ ವಿನಾಶವನ್ನು ಮಾಡುತ್ತಲೇ ಇರುತ್ತವೆ.
ಯುನಿಸೆಫ್‌ನ ಮೊಜಾಂಬಿಕದ ವಕ್ತಾರ ಗೈ ಟೇಲರ್ ಮಾತನಾಡಿ, ಉತ್ತರ ಮೊಜಾಂಬಿಕ್‌ನ ದೊಡ್ಡ ಪ್ರದೇಶಗಳಲ್ಲಿನ ಪರಿಸ್ಥಿತಿ ವಿನಾಶಕಾರಿ ಪರಿಣಾಮಗಳನ್ನು ಉಂಟು ಮಾಡಿದೆ ಎಂದು ಹೇಳಿದ್ದಾರೆ. ಇಲ್ಲಿನ ಜನರು ಈಗಾಗಲೇ ಅತ್ಯಂತ ಅನಿಶ್ಚಿತ ಪರಿಸ್ಥಿತಿಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ 3.4 ಮಿಲಿಯನ್ ಮಕ್ಕಳಿಗೆ ಮಾನವೀಯ ನೆರವಿನ ಅಗತ್ಯವಿದೆ. ಈ ಬಿಕ್ಕಟ್ಟಿನ ಮಧ್ಯೆಯೇ ಮಕ್ಕಳು, ಕುಟುಂಬಗಳು ಸೇರಿದಂತೆ ಅನೇಕ ಜನರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಇಡೀ ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ಹೀಗಾಗಿ ಇಲ್ಲಿನ ಜನರಿಗೆ ತುರ್ತಾಗಿ ಆಶ್ರಯ ಬೇಕಿದೆ ಎಂದು ಅವರು ಅಲ್ ಜಜೀರಾಗೆ ತಿಳಿಸಿದ್ದಾರೆ.
ಹಿಂದೂ ಮಹಾಸಾಗರದ ಮಯೊಟ್ಟೆ ದ್ವೀಪದ ಮೂಲಕ ದಾಂಗುಡಿ ಇಟ್ಟ ಚಿಡೋ ಭಾನುವಾರ ಮೊಜಾಂಬಿಕ್‌ನಲ್ಲಿ ಭೂಕುಸಿತವನ್ನುಂಟು ಮಾಡಿತ್ತು. ಫ್ರೆಂಚ್ ಸಾಗರೋತ್ತರ ಪ್ರದೇಶವಾದ ಮಾಯೊಟ್ಟೆಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದರು ಎಂದು ವರದಿಯಾಗಿದೆ. 1,500 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಇದರಲ್ಲಿ 200 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದ್ದಾರೆ ಎಂದು ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ : ಕರಾವಳಿ ಪ್ರದೇಶಗಳಿಗೆ ಅಪಾಯದ ಎಚ್ಚರಿಕೆ