ರಾಮನಗರ: ಚನ್ನಪಟ್ಟಣ ತಾಲೂಕಿನಲ್ಲಿ ನಿರಂತರವಾಗಿ ಕಾಡಾನೆಗಳ ದಾಳಿಯಿಂದ ನಲುಗಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಉಪಟಳ ನೀಡುತ್ತಿದ್ದ ಎರಡು ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸಿಕ್ಕಿದ್ದು, ಇದರ ಬೆನ್ನಲ್ಲೇ ಕ್ಯಾಪ್ಟನ್ ಮಹೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಒಂದು ಪುಂಡಾನೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶ ಕಂಡಿದ್ದಾರೆ.
ರಾಮನಗರ ಜಿಲ್ಲೆಯಲ್ಲಿ ನಿರಂತರವಾಗಿ ವರ್ಷಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ತೆಂಗಿನಕಲ್ಲು, ಅಚ್ಚಲು, ಕಬ್ಬಾಳು ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಪ್ರತಿದಿನವೂ ರೈತರ ರಾಗಿ, ಬಾಳೆ, ಭತ್ತ, ಹಲಸು ಸೇರಿ ಹಲವು ಬೆಳೆಗಳು ನಾಶವಾಗುತ್ತಿದೆ. ಕಳೆದ ಕೆಲದಿನಗಳ ಹಿಂದೆ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಸಹ ಅರಣ್ಯಾಧಿಕಾರಿಗಳ ಸಭೆ ನಡೆಸಿದ್ದರು. ಇದರ ಜೊತೆಗೆ ರೈತರೂ ಸಹ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಎರಡು ಕಾಡಾನೆ ಸೆರೆಗೆ ಮಡಿಕೇರಿಯಿಂದ 6 ಸಾಕಾನೆಗಳು ಬಂದಿವೆ.
ಕ್ಯಾಪ್ಟನ್ ಮಹೇಂದ್ರ ಸಾರಥ್ಯ: ಮಹೇಂದ್ರ ಆನೆ ತಂಡದ ನಾಯಕನಾಗಿದ್ದು, ಕೆಲ ವರ್ಷಗಳ ಹಿಂದೆ ಮಹೇಂದ್ರ ಆನೆಯನ್ನು ಹಿಡಿದು ಅರಣ್ಯ ಸಿಬ್ಬಂದಿ ಪಳಗಿಸಿದ್ದರು. ಇದೀಗ ಅದೇ ಆನೆಯ ನಾಯಕತ್ವದಲ್ಲಿ ಕಾರ್ಯಾಚರಣೆ ಶುರು ಮಾಡಲಾಗಿದೆ. ಯಾವುದೇ ಅಪಾಯ ಆಗದೇ ಕಾರ್ಯಾಚರಣೆ ಯಶಸ್ವಿಯಾಗಲಿ ಎಂದು ಮಹೇಂದ್ರ, ಭೀಮ, ಪ್ರಶಾಂತ, ಸುಗ್ರೀವ, ಧನಂಜಯ, ಹರ್ಷ ಆನೆಗಳು ಬಂದಿದ್ದು, ಶಾಸಕ ಸಿ.ಪಿ.ಯೋಗೇಶ್ವರ್, ಪತ್ನಿ ಶೀಲಾ ಜೊತೆಗೆ DFO ರಾಮಕೃಷ್ಣಪ್ಪ ಹಾಗೂ ರೈತರು ತಾಲೂಕಿನ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿದರು.
ಇಂದು ಒಂದು ಆನೆ ಸೆರೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಟಾಸ್ಕ್ ಫೋರ್ಸ್ ಸಿಬ್ಬಂದಿ ಜೊತೆಗೆ ವೈದ್ಯಕೀಯ ತಂಡವೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.
ಕಾರ್ಯಾಚರಣೆ ಯಶಸ್ವಿ, ಸೆರೆ ಸಿಕ್ಕ ಕಾಡಾನೆ: ಕಾಡಾನೆ ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಸಲಗವೊಂದನ್ನು ಸೆರೆ ಹಿಡಿಯಲಾಗಿದೆ. ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿದು ಬಳಿಕ ಲಾರಿಯಲ್ಲಿ ರವಾನೆ ಮಾಡಲಾಯಿತು. ಪುಂಡಾನೆಯನ್ನು ಭೀಮ, ಧನಂಜಯ, ಮಹೇಂದ್ರ, ಹರ್ಷ, ಸುಗ್ರೀವ, ಪ್ರಶಾಂತ ಸಾಕಾನೆಗಳ ಸಹಾಯದಿಂದ ಚನ್ನಪಟ್ಟಣದ ತಿಮ್ಮಯ್ಯನ ದೊಡ್ಡಿ ಗ್ರಾಮದ ಬಳಿಯ ಚಿಕ್ಕಮಣ್ಣುಗುಡ್ಡೆ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಯಿತು.
ಒಟ್ಟಾರೆ ಕನಕಪುರದ ಹೆಗ್ಗನೂರುದೊಡ್ಡಿಯಲ್ಲಿ ಓರ್ವ ರೈತ ಸಾವನ್ನಪ್ಪುತ್ತಿದ್ದಂತೆ ಎಚ್ಚೆತ್ತಿರುವ ಅರಣ್ಯ ಇಲಾಖೆ ಈಗ ಕಾಡಾನೆಗಳ ಸೆರೆಗೆ ಅನುಮತಿ ನೀಡಿದೆ. ಆದರೆ ಮತ್ತೆ ಕಾಡಿನಿಂದ ಆನೆಗಳು ಬರಲಿವೆ. ಹಾಗಾಗಿ ಶಾಶ್ವತ ಪರಿಹಾರದ ಬಗ್ಗೆ ಚಿಂತನೆ ನಡೆಸಬೇಕಿದೆ. ಅಂತೂ ಕಾರ್ಯಾಚರಣೆ ಮೊದಲ ದಿನವೇ ಒಂದು ಪುಂಡಾನೆಯನ್ನು ಸೆರೆಹಿಡಿಯುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಕಾಡಾನೆ ಸೆರೆ ಸದ್ಯದ ಮಟ್ಟಿಗೆ ರೈತರಿಗೆ ತುಸು ನೆಮ್ಮದಿ ತರಿಸಿದೆ.
"ಜಿಲ್ಲೆಯಲ್ಲಿ ಈಗ ಕಾಡಾನೆಗಳ ಹಿಂಡು ಬೀಡುಬಿಟ್ಟಿವೆ. ಸದ್ಯಕ್ಕೆ ಎರಡು ಕಾಡಾನೆ ಹಿಡಿಯಲು ಅನುಮತಿ ಸಿಕ್ಕಿದೆ" ಎಂದು DFO ತಿಳಿಸಿದರು.
ಯೋಗೇಶ್ವರ್ ಮಾತನಾಡಿ, "ದಶಕಗಳಿಂದ ನಮ್ಮ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದೆ. ಆನೆಗಳ ಸೆರೆಗೆ ಸಾಕಷ್ಟು ಪ್ರಯತ್ನ ಕೂಡ ಮಾಡಲಾಗಿದೆ. ಅದರಂತೆ ಆನೆಗಳ ತಂಡ ರಚಿಸಿ ಕ್ರಮ ಕೈಗೊಳ್ಳಲಾಗಿದೆ. ಕಾಡಾನೆ ಸೆರೆ ಹಿಡಿಯುವುದು ಶಾಶ್ವತ ಪರಿಹಾರ ಅಲ್ಲ, ಆದರೆ ತಾತ್ಕಾಲಿಕವಾಗಿ ಈ ಕ್ರಮಕೈಗೊಳ್ಳಲಾಗಿದೆ. ಮುಂದೆ ಆನೆ ಶಿಬಿರ ಮಾಡಲು ಸಹ ಕ್ರಮವಹಿಸಲಾಗುತ್ತದೆ" ಎಂದರು.
ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಿ.ಟಿ.ರವಿ ಆಕ್ಷೇಪಾರ್ಹ ಪದ ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಈ ವಿಚಾರವಾಗಿ ಈಗ ಚರ್ಚೆ ನಡೆಯುತ್ತಿದೆ. ಅವರ ವಿರುದ್ಧ ದೂರು ದಾಖಲಾಗಿ ಅರೆಸ್ಟ್ ಆಗಿದ್ದಾರೆ. ಆದರೆ ಒಬ್ಬ ಹೆಣ್ಣುಮಗಳನ್ನು ಸದನದಲ್ಲಿ ಈ ರೀತಿ ನಡೆಸಿಕೊಳ್ಳುವುದು ಶೋಭೆ ತರುವುದಿಲ್ಲ. ಸದನ ಒಂದು ದೇವಾಲಯ, ಅಲ್ಲಿ ಈ ರೀತಿ ಆಗಬಾರದು" ಎಂದು ಹೇಳಿದರು.
ಇದನ್ನೂ ಓದಿ: VIDEO: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಯುವಕರು ಬಚಾವ್: ಲಾರಿ ಹತ್ತಿಸಿಕೊಂಡ ಚಾಲಕ