ನವದೆಹಲಿ: ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಸಿಪಿಐಒ) ಮತ್ತು ಟ್ರಸ್ಟ್ನ ಮೊದಲ ಮೇಲ್ಮನವಿ ಪ್ರಾಧಿಕಾರದ ಬಗೆಗಿನ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಜುಲೈ 8, 2022 ರ ನಿರ್ಧಾರವನ್ನು ಪ್ರಶ್ನಿಸಿ ನೀರಜ್ ಕುಮಾರ್ ಎಂಬುವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಕುಮಾರ್ ಅವರು ಜುಲೈ 2022 ರಲ್ಲಿ ಗೃಹ ಸಚಿವಾಲಯಕ್ಕೆ (ಎಂಎಚ್ಎ) ಇದೇ ರೀತಿಯ ಮಾಹಿತಿಯನ್ನು ಕೋರಿ ಆರ್ಟಿಐ ಅರ್ಜಿ ಸಲ್ಲಿಸಿದ್ದರು. ಆದರೆ ಗೃಹ ಸಚಿವಾಲಯ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಭಾರತ ಸರ್ಕಾರದ ಒಡೆತನದಲ್ಲಿಲ್ಲ, ಭಾರತ ಸರ್ಕಾರದಿಂದ ನಿಯಂತ್ರಿಸಲ್ಪಡುವುದಿಲ್ಲ ಅಥವಾ ಸರ್ಕಾರ ಅದಕ್ಕೆ ಯಾವುದೇ ಹಣಕಾಸು ಒದಗಿಸುವುದಿಲ್ಲವಾದ್ದರಿಂದ ಇದು ಸಾರ್ವಜನಿಕ ಪ್ರಾಧಿಕಾರದ ವ್ಯಾಖ್ಯಾನದ ಅಡಿಯಲ್ಲಿ ಬರುವುದಿಲ್ಲ ಎಂದು ಸಚಿವಾಲಯ ವಾದಿಸಿತು.
ನ್ಯಾಯಾಲಯದಲ್ಲಿ ಅರ್ಜಿದಾರರ ಪರ ವಾದಿಸಿದ ವಕೀಲ ಪ್ರಶಾಂತ್ ಭೂಷಣ್, ಸಿಐಸಿ ಆದೇಶವನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ಮಧ್ಯಪ್ರವೇಶಿಸುವಂತೆ ಕೋರಿದರು.
ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಟ್ರಸ್ಟ್ ಸ್ವಾಯತ್ತ ಸಂಸ್ಥೆಯಾಗಿದ್ದು, ಅದನ್ನು ಸಾರ್ವಜನಿಕ ಪ್ರಾಧಿಕಾರವೆಂದು ಘೋಷಿಸಬಾರದು ಎಂದು ಗೃಹ ಸಚಿವಾಲಯ (ಎಂಎಚ್ಎ) ಮತ್ತು ರಾಮ್ ಜನ್ಮಭೂಮಿ ಟ್ರಸ್ಟ್ ವಾದಿಸಿದವು. ವಾದಗಳನ್ನು ಪರಿಗಣಿಸಿದ ನಂತರ ಹಾಗೂ ಈ ವಿಷಯವನ್ನು ಸುದೀರ್ಘವಾಗಿ ಆಲಿಸಿದ ನಂತರ ನ್ಯಾಯಾಲಯವು ಮಧ್ಯಪ್ರವೇಶಿಸಲು ನಿರಾಕರಿಸಿತು.
ಇದನ್ನೂ ಓದಿ : ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ: 60 ದಿನಗಳ ಬಳಿಕ ಆರೋಪಿಗಳನ್ನು ಪೊಲೀಸ್ ವಶಕ್ಕೆ ನೀಡಲಾಗದು - ಹೈಕೋರ್ಟ್ - SUICIDE ABETMENT CASE