ಕರ್ನಾಟಕ

karnataka

ETV Bharat / international

ಇರಾನ್​ ಚುನಾವಣೆ: ಮತದಾನ ಆರಂಭ, ಜನತೆಯ ನಿರುತ್ಸಾಹ - ಇರಾನ್​

ಇರಾನ್​ನಲ್ಲಿ ಸಾರ್ವತ್ರಿಕ ಚುನಾವಣೆಗಾಗಿ ಮತದಾನ ಆರಂಭವಾಗಿದೆ.

Iran elections
Iran elections

By ETV Bharat Karnataka Team

Published : Mar 1, 2024, 1:07 PM IST

ಟೆಹ್ರಾನ್ (ಇರಾನ್): ಇರಾನ್​ನ 12ನೇ ಸಂಸದೀಯ ಮತ್ತು ತಜ್ಞರ ಅಸೆಂಬ್ಲಿ ಚುನಾವಣೆಗೆ ಶುಕ್ರವಾರ ಮತದಾನ ಆರಂಭವಾಗಿದೆ. ದೇಶದ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ತಮ್ಮ ಮತ ಚಲಾಯಿಸಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ. 30,945,133 ಪುರುಷರು ಮತ್ತು 30,227,165 ಮಹಿಳೆಯರು ಸೇರಿದಂತೆ ಒಟ್ಟು 61,172,298 ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಚುನಾವಣಾ ಪ್ರಧಾನ ಕಚೇರಿಯ ಪ್ರಕಾರ, ಸಂಸದೀಯ ಚುನಾವಣೆಗೆ ಒಟ್ಟು 15,000 ವ್ಯಕ್ತಿಗಳು ಕಣದಲ್ಲಿದ್ದರೆ, ತಜ್ಞರ ಅಸೆಂಬ್ಲಿಗೆ 144 ವ್ಯಕ್ತಿಗಳು ಕಣದಲ್ಲಿದ್ದಾರೆ. ಮತದಾರರು ಮಜ್ಲಿಸ್ (ಇರಾನಿನ ಸಂಸತ್ತು) ಗೆ 290 ಪ್ರತಿನಿಧಿಗಳನ್ನು ಮತ್ತು ತಜ್ಞರ ಸಭೆಗೆ 88 ಪ್ರತಿನಿಧಿಗಳನ್ನು ಆಯ್ಕೆ ಮಾಡಲಿದ್ದಾರೆ.

ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ದೇಶದ ಸರ್ವೋಚ್ಚ ನಾಯಕನ ಸ್ಥಾನದಲ್ಲಿರುವ ಅಯತೊಲ್ಲಾ ಅಲಿ ಖಮೇನಿ ಗುರುವಾರ ಮತದಾರರನ್ನು ಉದ್ದೇಶಿಸಿ ಮಾತನಾಡಿ, ಜನತೆ ಮತದಾನ ಮಾಡುವಂತೆ ಹಾಗೂ ಮತದಾನದಿಂದ ದೂರ ಉಳಿದರೆ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು.

ಕಾರ್ಯಕರ್ತೆ ಮಹ್ಸಾ ಅಮಿನಿ ಅವರ ಸಾವಿನಿಂದ 2022 ರಲ್ಲಿ ರಾಷ್ಟ್ರವ್ಯಾಪಿ ಸರ್ಕಾರಿ ವಿರೋಧಿ ಪ್ರತಿಭಟನೆಗಳ ನಂತರ ಇರಾನ್ ನಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಇದಕ್ಕೂ ಮುನ್ನ ಇರಾನ್​ನಲ್ಲಿ 2019 ರಲ್ಲಿ ಚುನಾವಣೆ ನಡೆದಿದ್ದವು.

'ನೈತಿಕ ಪೊಲೀಸ್' ಗಿರಿಯ ಪ್ರಾಬಲ್ಯ ಹೆಚ್ಚುತ್ತಿರುವುದು, ಕುಸಿಯುತ್ತಿರುವ ಆರ್ಥಿಕತೆ, ಸಾಮೂಹಿಕ ಪ್ರತಿಭಟನೆಗಳು, ಇಸ್ರೇಲ್-ಗಾಝಾ ಯುದ್ಧ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಇರಾನ್ ನ ನಿಲುವಿನಿಂದ ಇರಾನಿನ ಸರ್ಕಾರದ ಬಗ್ಗೆ ಮತದಾರರ ಹತಾಶೆ ಹೆಚ್ಚಿರುವುದರಿಂದ ಇಂದಿನ ಚುನಾವಣೆಯಲ್ಲಿ ಮತದಾನದ ಪ್ರಮಾಣ ಬಹಳ ಕಡಿಮೆಯಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಇರಾನ್​ನಲ್ಲಿ ಅಧ್ಯಕ್ಷ ಸ್ಥಾನ, ಸಂಸತ್ತು ಮತ್ತು ತಜ್ಞರ ಅಸೆಂಬ್ಲಿಗೆ ಸ್ಪರ್ಧಿಸಬಯಸುವ ಅಭ್ಯರ್ಥಿಗಳನ್ನು ಮೊದಲಿಗೆ ಗಾರ್ಡಿಯನ್ ಕೌನ್ಸಿಲ್ ಅನುಮೋದಿಸಬೇಕಾಗುತ್ತದೆ. ಇದು ಧರ್ಮಗುರುಗಳು ಮತ್ತು ನ್ಯಾಯಶಾಸ್ತ್ರಜ್ಞರ ಸಂಸ್ಥೆಯಾಗಿದೆ. ಇದರಲ್ಲಿ ಪ್ರಸ್ತುತ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ನೇಮಕ ಮಾಡಿದ ವ್ಯಕ್ತಿಗಳು ಮಹತ್ವದ ಪಾತ್ರ ವಹಿಸುತ್ತಾರೆ.

ಇರಾನ್ ನ ಧಾರ್ಮಿಕ ಆಡಳಿತಗಾರರು ತಮ್ಮ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಲು ಮತದಾನ ಪ್ರಮಾಣ ಹೆಚ್ಚಾಗಲಿ ಎಂದು ಬಯಸುತ್ತಿದ್ದಾರೆ. 2022 ರಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ಸಾಮಾಜಿಕ ಕಾರ್ಯಕರ್ತೆಯ ಸಾವಿನ ನಂತರ ಇರಾನ್ ಸರ್ಕಾರದ ವಿಶ್ವಾಸಾರ್ಹತೆ ಬಹಳಷ್ಟು ಕುಸಿದಿದೆ.

ಇದನ್ನೂ ಓದಿ :ಪಾಕಿಸ್ತಾನಕ್ಕೆ ನೀಡಿದ ಸಾಲ ಮರುಪಾವತಿ ಅವಧಿ ಮತ್ತೊಂದು ವರ್ಷ ವಿಸ್ತರಿಸಿದ ಚೀನಾ

ABOUT THE AUTHOR

...view details