ಮೆಲ್ಬೋರ್ನ್/ಚಂಡೀಗಢ:ಆಸ್ಟ್ರೇಲಿಯಾದಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳ ನಡುವಿನ ಜಗಳದಲ್ಲಿ ಭಾರತದ 22 ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಭಾರತೀಯ ಮೂಲದ ಸಹೋದರರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಹರ್ಯಾಣದ ಕರ್ನಾಲ್‌ನಲ್ಲಿರುವ ಮೃತರ ಚಿಕ್ಕಪ್ಪ ಯಶ್ವೀರ್ ಪ್ರಕಾರ, ಬಾಡಿಗೆ ವಿಚಾರದಲ್ಲಿ ಭಾರತೀಯ ವಿದ್ಯಾರ್ಥಿಗಳ ನಡುವಿನ ವಿವಾದದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ನವಜೀತ್ ಸಂಧು ಮೇಲೆ ಇನ್ನೊಬ್ಬ ವಿದ್ಯಾರ್ಥಿ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
"ನವಜೀತ್‌ನ ಸ್ನೇಹಿತ (ಮತ್ತೊಬ್ಬ ಭಾರತೀಯ ವಿದ್ಯಾರ್ಥಿ) ಬಳಿ ಕಾರು ಇತ್ತು. ನವಜೀತ್ ತನ್ನ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅವನ ಮನೆಗೆ ತೆರಳಿದ್ದನು. ನವಜೀತ್ ಒಳಗೆ ತೆರಳದೇ ತನ್ನ ಸ್ನೇಹಿತನನ್ನು ಸಾಮಾನುಗಳನ್ನು ತರಲು ಕಳುಹಿಸಿದ್ದನು. ಅವನ ಸ್ನೇಹಿತ ಮನೆಯೊಳಗೆ ಹೋದಾಗ ನವಜೀತ್ ಕೆಲವು ಕೂಗುಗಳನ್ನು ಕೇಳಿ ಓಡಿ ಬಂದಿದ್ದಾನೆ. ಗಲಾಟೆ ನಡೆಯುವುದನ್ನು ಕಂಡು ನವಜೀತ್ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆತನ ಎದೆಗೆ ಚಾಕುವಿನಿಂದ ಮಾರಣಾಂತಿಕವಾಗಿ ಇನ್ನೊಬ್ಬ ಸ್ನೇಹಿತ ಇರಿದಿದ್ದಾನೆ ಎಂದು ಯಶ್ವೀರ್ ಹೇಳಿದ್ದಾರೆ.
ನವಜೀತ್ ಅವರಂತೆ ಆರೋಪಿಯೂ ಕೂಡ ಕರ್ನಾಲ್ ಮೂಲದವರಾಗಿದ್ದಾರೆ. ಭಾನುವಾರ ಮುಂಜಾನೆ ಘಟನೆಯ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದೆ. ಘಟನೆಯಲ್ಲಿ ನವಜೀತ್ ಅವರ ಜೊತೆಗಿದ್ದ ಸ್ನೇಹಿತನಿಗೂ ಗಾಯಗಳಾಗಿವೆ ಎಂದು ಮೃತರ ಚಿಕ್ಕಪ್ಪ ತಿಳಿಸಿದ್ದಾರೆ.