ನ್ಯೂಯಾರ್ಕ್:ಮಾದಕ ವ್ಯಸನಿಯೊಬ್ಬ ಎಂಬಿಎ ಪದವೀಧರ 25 ವರ್ಷದ ಭಾರತೀಯ ವಿದ್ಯಾರ್ಥಿಯ ತಲೆಗೆ ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ಜಾರ್ಜಿಯಾ ರಾಜ್ಯದ ಲಿಥೋನಿಯಾ ನಗರದಲ್ಲಿ ಇತ್ತೀಚೆಗೆ ನಡೆದಿದೆ.
ಆರೋಪಿ ಜೂಲಿಯನ್ ಫಾಕ್ನರ್ ಎಂಬಾತ ವಿವೇಕ್ ಸೈನಿಯ ತಲೆಗೆ ಸುಮಾರು 50 ಬಾರಿ ಸುತ್ತಿಗೆಯಿಂದ ನಿರ್ದಯವಾಗಿ ಹಲ್ಲೆಗೈದಿದ್ದಾನೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಫಾಕ್ನರ್‌ಗೆ ಆಶ್ರಯ ನೀಡಿದ ಅಂಗಡಿಯೊಂದರಲ್ಲಿ ಅರೆಕಾಲಿಕ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದ ಸೈನಿ, ಆರೋಪಿಗೆ ಸುಮಾರು ಎರಡು ದಿನಗಳ ಕಾಲ ಆಶ್ರಯ ನೀಡಿದ್ದರು. ಚಿಪ್ಸ್, ಕೋಕ್, ನೀರು ಮತ್ತು ಬೆಚ್ಚಗಿರಲು ಜಾಕೆಟ್ ಸಹ ಒದಗಿಸಿದ್ದರು ಎಂದು M9 ನ್ಯೂಸ್ ಚಾನೆಲ್ ಭಾನುವಾರ ವರದಿ ಮಾಡಿದೆ.
ಜನವರಿ 16ರಂದು ಮನೆಗೆ ಹೋಗುತ್ತಿದ್ದಾಗ ಸೈನಿಯನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಸೈನಿಯ ಮೃತದೇಹದ ಬಳಿಯೇ ಆರೋಪಿ ಫಾಕ್ನರ್ ನಿಂತಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಟ್ಲಾಂಟಾದಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ್ದು, ''ಭಾರತೀಯ ವಿದ್ಯಾರ್ಥಿ ವಿವೇಕ್ ಸೈನಿಯ ಹತ್ಯೆ ಭಯಾನಕ, ಕ್ರೂರ ಮತ್ತು ಹೇಯ ಘಟನೆ. ನಾವು ತೀವ್ರ ದುಃಖಿತರಾಗಿದ್ದಾರೆ. ಈ ದಾಳಿಯನ್ನು ಖಂಡಿಸುತ್ತೇವೆ. ಯುಎಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಸೈನಿ ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ. ಮೃತ ದೇಹವನ್ನು ಭಾರತಕ್ಕೆ ಕಳುಹಿಸಲು ಎಲ್ಲಾ ಸಹಾಯವನ್ನೂ ಒದಗಿಸಲಾಗಿದೆ" ಎಂದು ತಿಳಿಸಿದೆ.
ಬಿ.ಟೆಕ್ ವ್ಯಾಸಂಗ ಮುಗಿಸಿ ಎರಡು ವರ್ಷಗಳ ಹಿಂದೆ ಅಮೆರಿಕಕ್ಕೆ ವಲಸೆ ಹೋಗಿದ್ದ ವಿದ್ಯಾರ್ಥಿ ಇತ್ತೀಚೆಗಷ್ಟೇ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಹರ್ಯಾಣದಲ್ಲಿರುವ ಸೈನಿ ಕುಟುಂಬವು ಮಗನ ಸಾವಿಗೆ ದುಃಖ ವ್ಯಕ್ತಪಡಿಸಿದೆ. ತನ್ನ ಕನಸಿನ ಉದ್ಯೋಗ ಪಡೆದುಕೊಳ್ಳಲು ವಿದ್ಯಾರ್ಥಿ ಶ್ರಮಿಸುತ್ತಿದ್ದ ಎಂದು ಪೋಷಕರಾದ ಗುರ್ಜಿತ್ ಸಿಂಗ್ ಮತ್ತು ಲಲಿತಾ ಸೈನಿ ತಿಳಿಸಿದರು.
ಇದನ್ನೂ ಓದಿ:ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ವಿರುದ್ಧ ದೋಷಾರೋಪಣಾ ನಿರ್ಣಯ ಮಂಡಿಸಲು ವಿಪಕ್ಷ ಸಿದ್ಧತೆ