ಲಾಹೋರ್ (ಪಾಕಿಸ್ತಾನ) :ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಯುವತಿಯನ್ನು ವರಿಸಲು ಪಾಕಿಸ್ತಾನಕ್ಕೆ ತೆರಳಿದ ಭಾರತದ ವ್ಯಕ್ತಿಯನ್ನು ಅಲ್ಲಿನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಗಡಿ ದಾಟಿ ಬಂದಿದ್ದಕ್ಕೆ ಆತನ ವಿರುದ್ಧ ಕ್ರಮ ಜರುಗಿಸಲಾಗಿದೆ.
ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಬಾದಲ್ ಬಾಬು (30) ಪಾಕಿಸ್ತಾನದಲ್ಲಿ ಸಿಕ್ಕಿಬಿದ್ದವ. ಈತ ಕಳೆದ ವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮಂಡಿ ಬಹೌದ್ದೀನ್ ಜಿಲ್ಲೆಗೆ (ಲಾಹೋರ್‌ನಿಂದ ಸುಮಾರು 240 ಕಿಮೀ) ಅಕ್ರಮವಾಗಿ ಗಡಿ ದಾಟಿದ್ದಾನೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಎಲ್ಲವೂ ಫೇಸ್‌ಬುಕ್ ಗೆಳತಿಗಾಗಿ:ಪಾಕಿಸ್ತಾನದ ಬಹೌದ್ದೀನ್ ಜಿಲ್ಲೆಯ ಸನಾ ರಾಣಿಯನ್ನು (21) ಬಾದಲ್ ಬಾಬು ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡಿದ್ದ. ಕಳೆದ ಎರಡೂವರೆ ವರ್ಷಗಳಿಂದ ಅವರು ಸಂಪರ್ಕದಲ್ಲಿದ್ದರು. ಸನಾಳನ್ನು ಪ್ರೀತಿಸುತ್ತಿದ್ದ ಬಾಬು ಆಕೆಯನ್ನು ವಿವಾಹವಾಗಲು ಬಯಸಿದ್ದ. ಹೀಗಾಗಿ, ಯಾವುದೇ ಅಧಿಕೃತ ದಾಖಲೆಗಳನ್ನ ಪಡೆದುಕೊಳ್ಳದೇ, ಬಾಬು ಪಾಕಿಸ್ತಾನದ ಗಡಿಯೊಳಕ್ಕೆ ಹೋಗಿದ್ದಾನೆ.
ಉಲ್ಟಾ ಹೊಡೆದ ಗೆಳತಿ:ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಭಾರತದ ಬಾಬುವನ್ನು ಅಲ್ಲಿನ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತನ್ನ ಗೆಳತಿಯನ್ನು ವಿವಾಹವಾಗಲು ಬಂದಿದ್ದಾಗಿ ತಿಳಿಸಿದ್ದಾನೆ. ಪೊಲೀಸರು, ಫೇಸ್‌ಬುಕ್ ಸ್ನೇಹಿತೆ ಸನಾ ರಾಣಿಯನ್ನು ಈ ಬಗ್ಗೆ ವಿಚಾರಿಸಿದಾಗ, ತಾವಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗಿದ್ದು ನಿಜ. ಆದರೆ, ವಿವಾಹವಾಗಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾಳೆ.