ನವದೆಹಲಿ: ಕಂಕೆಸಂತುರೈ (ಕೆಕೆಎಸ್) ಬಂದರನ್ನು ಅಭಿವೃದ್ಧಿಪಡಿಸಲು ಶ್ರೀಲಂಕಾಕ್ಕೆ 61.5 ಮಿಲಿಯನ್ ಡಾಲರ್ ಅನುದಾನ ನೀಡಲು ಭಾರತ ಸರ್ಕಾರ ನಿರ್ಧರಿಸಿದೆ. ಶ್ರೀಲಂಕಾದ ಬಂದರು, ಹಡಗು ಮತ್ತು ವಿಮಾನಯಾನ ಸಚಿವ ನಿಮಲ್ ಸಿರಿಪಾಲ ಡಿ ಸಿಲ್ವಾ ಮತ್ತು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನರ್ ಸಂತೋಷ್ ಝಾ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವರದಿಯ ಪ್ರಕಾರ, ಉಬ್ಬರವಿಳಿತಗಳು, ಪ್ರವಾಹಗಳು, ಅಲೆಗಳು ಮತ್ತು ಚಂಡಮಾರುತದ ಉಲ್ಬಣಗಳಿಂದ ಹಡಗುಗಳನ್ನು ರಕ್ಷಿಸಲು ಬ್ರೇಕ್ ವಾಟರ್ ಅಥವಾ ಪರ್ಮನೆಂಟ್ ಸ್ಟ್ರಕ್ಚರ್ ರೂಪಿಸಲಾಗುತ್ತದೆ. ಈ ಮೂಲಕ ಬಂದರಿನ 30 ಮೀಟರ್ ಆಳದಲ್ಲಿ ಹೂಳೆತ್ತಲಾಗುತ್ತದೆ. ಇದರಿಂದ ದೊಡ್ಡ ಗಾತ್ರದ ಹಡಗುಗಳು ಅಲ್ಲಿ ನಿಲ್ಲಿಸಲು ಅನುವಾಗುತ್ತದೆ. ಚರ್ಚೆಯ ವೇಳೆ, ಭಾರತೀಯ ಹೈಕಮಿಷನರ್ ಉಭಯ ದೇಶಗಳ ನಡುವಿನ ಪ್ರಾದೇಶಿಕ ಸಹಕಾರವನ್ನು ವೃದ್ಧಿಸಲು ಭಾರತ ಹೊಂದಿರುವ ಬದ್ಧತಯನ್ನು ವಿವರಿಸಲಾಗಿದೆ. ಶ್ರೀಲಂಕಾಕ್ಕೆ ಹೆಚ್ಚಿನ ಭಾರತೀಯ ಪ್ರವಾಸಿಗರನ್ನು ಆಕರ್ಷಿಸಲು ಸಂಪೂರ್ಣ ಸಹಕಾರ ನೀಡುವ ಬಗ್ಗೆ ಭರವಸೆ ನೀಡಿದೆ. ಶ್ರೀಲಂಕಾ ಭಾರತೀಯ ಪ್ರವಾಸಿಗರಿಗೆ ಉತ್ತಮವಾದ ಪ್ರವಾಸಿತಾಣ ಎಂದೂ ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತೀಯ ಪ್ರವಾಸಿಗರ ಅನುಕೂಲಕ್ಕೆ ಟರ್ಮಿನಲ್: ಶ್ರೀಲಂಕಾ ಸಚಿವ ಸಿರಿಪಾಲ ಡಿ ಸಿಲ್ವಾ ಪ್ರತಿಕ್ರಿಯಿಸಿ, ವಾಯುಯಾನ ಮತ್ತು ಹಡಗು ಕ್ಷೇತ್ರಗಳಲ್ಲಿ ಭಾರತ ಸರ್ಕಾರ ನೀಡಿದ ಬೆಂಬಲಕ್ಕಾಗಿ ಶ್ರೀಲಂಕಾ ಸರ್ಕಾರ ಮತ್ತು ತಮ್ಮ ಸಚಿವಾಲಯದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಚೆನ್ನೈ ಮತ್ತು ಜಾಫ್ನಾ ನಡುವೆ ವಿಮಾನಗಳ ಪ್ರಾರಂಭವನ್ನು ವಿಶೇಷವಾಗಿ ಶ್ಲಾಘಿಸಿದ ಅವರು, ಭಾರತೀಯ ಪ್ರವಾಸಿಗರ ಅನುಕೂಲಕ್ಕಾಗಿ ಬಂದರಿನಲ್ಲಿ ಎಸ್ಎಲ್ಆರ್ 600 ಮಿಲಿಯನ್ ವೆಚ್ಚದ ಹೊಸ ಟರ್ಮಿನಲ್ ಅನ್ನು ಸಹ ನಿರ್ಮಿಸಲಾಗುವುದು. ಕಳೆದ ಒಂಬತ್ತು ತಿಂಗಳಲ್ಲಿ, ಗಮನಾರ್ಹ ಸಂಖ್ಯೆಯ ಭಾರತೀಯ ಪ್ರವಾಸಿಗರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.