ನವದೆಹಲಿ: ಭಾರತವು ಪ್ಯಾಲೆಸ್ಟೈನ್ಗೆ 30 ಟನ್ ಔಷಧ ಮತ್ತು ಆಹಾರ ಪದಾರ್ಥಗಳನ್ನು ಒಳಗೊಂಡ ಮೊದಲ ಕಂತಿನ ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆ (ಯುಎನ್ಆರ್ಡಬ್ಲ್ಯೂಎ)ಯ ಮೂಲಕ ಪ್ಯಾಲೆಸ್ಟೈನ್ ಜನತೆಗೆ ಈ ಮಾನವೀಯ ನೆರವು ತಲುಪಿಸಲಾಗುತ್ತಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ರಣಧೀರ್ ಜೈಸ್ವಾಲ್, "ಭಾರತವು ಯುಎನ್ಆರ್ಡಬ್ಲ್ಯೂಎ ಮೂಲಕ ಪ್ಯಾಲೆಸ್ಟೈನ್ ಜನರಿಗೆ ಮಾನವೀಯ ನೆರವು ರವಾನಿಸಿದೆ. 30 ಟನ್ ಔಷಧ ಮತ್ತು ಆಹಾರ ಪದಾರ್ಥಗಳನ್ನು ಒಳಗೊಂಡ ಮೊದಲ ಕಂತಿನ ನೆರವು ಇಂದು ಹೊರಟಿದೆ. ವ್ಯಾಪಕ ಶ್ರೇಣಿಯ ಅಗತ್ಯ ಔಷಧಗಳು ಮತ್ತು ಶಸ್ತ್ರಚಿಕಿತ್ಸಾ ಸಾಮಗ್ರಿಗಳು, ದಂತ ಉತ್ಪನ್ನಗಳು, ಸಾಮಾನ್ಯ ವೈದ್ಯಕೀಯ ವಸ್ತುಗಳು ಮತ್ತು ಪ್ರೊಟೀನ್ ಒಳಗೊಂಡ ಬಿಸ್ಕತ್ತುಗಳು ಈ ಸಾಮಗ್ರಿಗಳಲ್ಲಿ ಸೇರಿವೆ." ಎಂದು ಬರೆದಿದ್ದಾರೆ.
ತನ್ನ ಹೇಳಿಕೆಯಂತೆ ನಡೆದುಕೊಂಡ ಭಾರತ:ದಕ್ಷಿಣ ಲೆಬನಾನ್ನಲ್ಲಿ ಯುದ್ಧ ಪರಿಸ್ಥಿತಿ ಉಲ್ಬಣಗೊಂಡಿರುವ ಮತ್ತು ಭೀಕರ ಸಂಘರ್ಷ ಮುಂದುವರೆದಿರುವ ಮಧ್ಯೆ ಆ ದೇಶದ ಸಂತ್ರಸ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಅಕ್ಟೋಬರ್ 18 ರಂದು ಭಾರತವು ಈಗಾಗಲೇ 11 ಟನ್ ವೈದ್ಯಕೀಯ ಸಾಮಗ್ರಿಗಳ ಮೊದಲ ಕಂತನ್ನು ಲೆಬನಾನ್ಗೆ ಕಳುಹಿಸಿದೆ. ಒಟ್ಟು 33 ಟನ್ ವೈದ್ಯಕೀಯ ಸಾಮಗ್ರಿಗಳನ್ನು ಭಾರತವು ಲೆಬನಾನ್ಗೆ ನೀಡಲಿದೆ.
ಹಮಾಸ್-ಇಸ್ರೇಲ್ ಸಂಘರ್ಷದಿಂದಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪ್ಯಾಲೆಸ್ಟೈನಿಯರಿಗೆ ಸಹಾಯ ಮಾಡುವ ಯುಎನ್ಆರ್ಡಬ್ಲ್ಯೂಎ ದ ಪ್ರಯತ್ನಗಳನ್ನು ಬೆಂಬಲಿಸುವುದನ್ನು ಮುಂದುವರಿಸುವುದಾಗಿ ಭಾರತ ಜುಲೈ 13 ರಂದು ಹೇಳಿದೆ.
ಪ್ಯಾಲೆಸ್ಟೈನ್ಗೆ ಮಾನ್ಯತೆ ನೀಡಿದ ಮೊದಲ ದೇಶಗಳಲ್ಲೊಂದು:ಪ್ಯಾಲೆಸ್ಟೈನ್ ಜನತೆಯ ಬೇಡಿಕೆಗಳನ್ನು ಬೆಂಬಲಿಸುವುದು ಭಾರತದ ವಿದೇಶಾಂಗ ನೀತಿಯ ಅವಿಭಾಜ್ಯ ಅಂಗವಾಗಿದೆ. 1974 ರಲ್ಲಿ, ಭಾರತವು ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (ಪಿಎಲ್ಒ) ಅನ್ನು ಪ್ಯಾಲೆಸ್ಟೈನ್ ಜನರ ಏಕೈಕ ಮತ್ತು ಕಾನೂನುಬದ್ಧ ಪ್ರತಿನಿಧಿಯಾಗಿ ಗುರುತಿಸಿದ ಮೊದಲ ಅರಬ್ ಅಲ್ಲದ ರಾಷ್ಟ್ರವಾಯಿತು. 1988 ರಲ್ಲಿ, ಭಾರತವು ಪ್ಯಾಲೆಸ್ಟೈನ್ ದೇಶಕ್ಕೆ ಮಾನ್ಯತೆ ನೀಡಿದ ಮೊದಲ ದೇಶಗಳಲ್ಲಿ ಒಂದಾಗಿದೆ. 1996 ರಲ್ಲಿ, ಭಾರತವು ಗಾಜಾದಲ್ಲಿ ತನ್ನ ಪ್ರತಿನಿಧಿ ಕಚೇರಿಯನ್ನು ತೆರೆಯಿತು. ನಂತರ ಅದನ್ನು 2003 ರಲ್ಲಿ ರಮಲ್ಲಾಗೆ ಸ್ಥಳಾಂತರಿಸಲಾಯಿತು.
1978 ರಿಂದ ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನಿಫಿಲ್, ಇತ್ತೀಚೆಗೆ ತನ್ನ ಕಾರ್ಯಾಚರಣೆಯನ್ನು ಮತ್ತೊಂದು ವರ್ಷಕ್ಕೆ ನವೀಕರಿಸಿದೆ. ದಕ್ಷಿಣ ಲೆಬನಾನ್ನಲ್ಲಿ ಹಿಂಸಾಚಾರ ಉಲ್ಬಣಗೊಳ್ಳುತ್ತಿರುವುದರಿಂದ ತನ್ನ ಶಾಂತಿಪಾಲನಾ ಪಡೆಗಳನ್ನು ರಕ್ಷಿಸುವ ಸಲುವಾಗಿ ಯುನಿಫಿಲ್ ಕಾರ್ಯಾಚರಣೆಯ ಅವಧಿಯನ್ನು ವಿಸ್ತರಿಸಿರುವುದಾಗಿ ಹೇಳಿದೆ.
ಇದನ್ನೂ ಓದಿ : 'ಹತ್ಯೆಗೆ ಯತ್ನಿಸಿದ್ದು ಗಂಭೀರ ಪ್ರಮಾದ, ಬೆಲೆ ತೆರಬೇಕಾಗುತ್ತದೆ': ಹಿಜ್ಬುಲ್ಲಾಗೆ ನೆತನ್ಯಾಹು ವಾರ್ನಿಂಗ್