ವಾಷಿಂಗ್ಟನ್:ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ ಓವಲ್ ಕಚೇರಿಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ''ಅಮೆರಿಕದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಜಾಗವಿಲ್ಲ. ನಮ್ಮ ರಾಜಕೀಯದ ಬಿಸಿ ತಗ್ಗಿಸುವ ಅಗತ್ಯವಿದೆ'' ಎಂದು ಹೇಳಿದರು.
"ನಾವು ಶತ್ರುಗಳಲ್ಲ. ನಾವು ನೆರೆಹೊರೆಯವರು, ನಾವು ಪರಸ್ಪರ ಸ್ನೇಹಿತರು ಮತ್ತು ಸಹೋದ್ಯೋಗಿಗಳು, ವಿಶೇಷವಾಗಿ ನಾವು ಅಮೆರಿಕದ ನಾಗರಿಕರು. ನಾವೆಲ್ಲರೂ ಒಗ್ಗಟ್ಟಿನಿಂದ ನಿಲ್ಲಬೇಕು" ಎಂದು ಬೈಡನ್ ಕರೆ ನೀಡಿದರು.
''ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ರಾಜಕೀಯ ಭಾವೋದ್ರೇಕಗಳು ಹೆಚ್ಚಾಗಬಹುದು. ಆದರೆ, ನಾವು ಎಂದಿಗೂ ಹಿಂಸಾಚಾರಕ್ಕೆ ಇಳಿಯಬಾರದು. ಯಾವುದೇ ರೀತಿಯ ಹಿಂಸೆಗೆ ಅಮೆರಿಕದಲ್ಲಿ ಜಾಗವಿಲ್ಲ. ಈ ಹಿಂಸಾಚಾರವನ್ನು ಸಾಮಾನ್ಯೀಕರಿಸಲು ನಾವು ಅನುಮತಿಸುವುದಿಲ್ಲ. ಅಮೆರಿಕದಲ್ಲಿ ಇಂತಹ ರಾಜಕೀಯ ಹಿಂಸಾಚಾರಕ್ಕೆ ಅವಕಾಶವಿಲ್ಲ'' ಎಂದು ಬೈಡನ್ ಹೇಳಿದರು.
ಅಮೆರಿಕದ ಅಧ್ಯಕ್ಷರು ಓವಲ್ ಕಚೇರಿಯಿಂದ ಮಾತನಾಡುವುದು ತುಂಬಾ ವಿರಳ. ಬೈಡನ್ ಅಧ್ಯಕ್ಷರಾದ ನಂತರ ಓವಲ್ ಕಚೇರಿಯಿಂದ ಭಾಷಣ ಮಾಡುತ್ತಿರುವುದು ಮೂರನೇ ಬಾರಿ. ಈ ಹಿಂದೆ ಟ್ರಂಪ್ ಎರಡು ಬಾರಿ ಮತ್ತು ಒಬಾಮಾ ಮೂರು ಬಾರಿ ಮಾತನಾಡಿದ್ದರು. ಭಾನುವಾರ ಓವಲ್ ಕಚೇರಿಯಿಂದ ಸುಮಾರು ಐದು ನಿಮಿಷಗಳ ಕಾಲ ಬೈಡನ್ ಮಾತನಾಡಿದರು.
''ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶವು ಸೋಮವಾರ ಮಿಲ್ವಾಕೀಯಲ್ಲಿ ಪ್ರಾರಂಭವಾಗುತ್ತಿದೆ. ಜೊತೆಗೆ ಎರಡೂ ಪಕ್ಷದ ಕಡೆಗಳಲ್ಲಿ ಭಾವೋದ್ರೇಕಗಳು ಹೆಚ್ಚಾಗುತ್ತವೆ'' ಎಂದ ಅವರು, ವಿವೇಚನಾರಹಿತ ಶಕ್ತಿ ಮೇಲುಗೈ ಸಾಧಿಸಬಾರದು. ಸಮತೋಲಿತ ಪ್ರಜಾಪ್ರಭುತ್ವದ ಮೇಲೆ ನಮ್ಮ ರಾಷ್ಟ್ರವನ್ನು ಸ್ಥಾಪಿಸಲಾಗಿದೆ. ಅಮೆರಿಕದ ಪ್ರಜಾಪ್ರಭುತ್ವದಲ್ಲಿ ವಾದಗಳನ್ನು ಆರೋಗ್ಯಕರ ರೀತಿಯಲ್ಲಿ ನಡೆಯುತ್ತಿವೆ. ಅಮೆರಿಕನ್ ಪ್ರಜಾಪ್ರಭುತ್ವದಲ್ಲಿ ಕಾನೂನಿನ ನಿಯಮವನ್ನು ಗೌರವಿಸಲಾಗುತ್ತದೆ. ಅಲ್ಲಿ ಸಭ್ಯತೆ, ಘನತೆ, ನ್ಯಾಯಕ್ಕೆ ಬೆಲೆಯಿದೆ, ಕೇವಲ ವಿಲಕ್ಷಣ ಕಲ್ಪನೆಗಳಲ್ಲ'' ಎಂದು ತಿಳಿಸಿದರು.