ಜೆರುಸಲೇಂ : ಹಮಾಸ್ ಶನಿವಾರ ಬಿಡುಗಡೆ ಮಾಡಲಿರುವ ಮೂವರು ಇಸ್ರೇಲಿ ನಾಗರಿಕ ಒತ್ತೆಯಾಳುಗಳ ಪಟ್ಟಿಯು ಇಸ್ರೇಲ್ಗೆ ತಲುಪಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ಶುಕ್ರವಾರ ತಿಳಿಸಿದೆ. ಈ ಪಟ್ಟಿಯಲ್ಲಿ ಇಸ್ರೇಲಿ-ಫ್ರೆಂಚ್ ಪ್ರಜೆ ಒಫರ್ ಕಾಲ್ಡೆರಾನ್ (54), ಇಸ್ರೇಲಿ-ಅಮೆರಿಕನ್ ಪ್ರಜೆ ಕೀತ್ ಸೀಗಲ್ (65) ಮತ್ತು ಇಸ್ರೇಲಿ ನಾಗರಿಕ ಯಾರ್ಡೆನ್ ಬಿಬಾಸ್ (35) ಸೇರಿದ್ದಾರೆ.
ಬೀಬಾಸ್ ಅವರ ಅವರ ಪತ್ನಿ ಶಿರಿ ಮತ್ತು ಇಬ್ಬರು ಪುತ್ರರಾದ ಐದು ವರ್ಷದ ಏರಿಯಲ್ ಮತ್ತು ಎರಡು ವರ್ಷದ ಕಾಫಿರ್ ಅವರನ್ನು ಕೂಡ ಅಕ್ಟೋಬರ್ 7, 2023 ರ ದಾಳಿಯಲ್ಲಿ ಹಮಾಸ್ ಒತ್ತೆಯಾಳಾಗಿ ಗಾಜಾಗೆ ಅಪಹರಿಸಿಕೊಂಡು ಹೋಗಿತ್ತು. ಆದರೆ ಇವರು ಇನ್ನೂ ಬದುಕಿದ್ದಾರಾ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ತಿಳಿದಿಲ್ಲ.
ಜನವರಿ 19 ರಿಂದ ಜಾರಿಗೆ ಬಂದ ಇಸ್ರೇಲ್ ಮತ್ತು ಹಮಾಸ್ ನಡುವಿನ ಒತ್ತೆಯಾಳುಗಳ ಬಿಡುಗಡೆಯ ಗಾಜಾ ಕದನ ವಿರಾಮ ಒಪ್ಪಂದದ ಪ್ರಕಾರ ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಶನಿವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಆರು ವಾರಗಳ ಕದನ ವಿರಾಮ ಒಪ್ಪಂದದ ಮೊದಲ ಹಂತ ಪ್ರಾರಂಭವಾದಾಗಿನಿಂದ, ಐವರು ಇಸ್ರೇಲಿ ನಾಗರಿಕರು, ಐವರು ಮಹಿಳಾ ಇಸ್ರೇಲಿ ಸೈನಿಕರು ಮತ್ತು ಐವರು ಥಾಯ್ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ ಗಾಜಾದಲ್ಲಿರುವ ಒಟ್ಟು 33 ಇಸ್ರೇಲಿ ಒತ್ತೆಯಾಳುಗಳು ಮತ್ತು ಇಸ್ರೇಲಿ ಜೈಲುಗಳಿಂದ ಸುಮಾರು 2,000 ಪ್ಯಾಲೆಸ್ಟೈನಿಯರನ್ನು ಬಿಡುಗಡೆ ಮಾಡುವ ಪ್ರಸ್ತಾಪವಿದೆ.