ಕರ್ನಾಟಕ

karnataka

ಗಾಜಾದಲ್ಲಿ ಕದನ ವಿರಾಮಕ್ಕೆ ಯತ್ನ: ಹಮಾಸ್ ಹಾಗೂ ಈಜಿಪ್ಟ್​ ಗುಪ್ತಚರ ಮುಖ್ಯಸ್ಥರ ಮಾತುಕತೆ - Gaza ceasefire talks

By ETV Bharat Karnataka Team

Published : Jun 30, 2024, 5:45 PM IST

ಗಾಜಾದಲ್ಲಿ ಕದನ ವಿರಾಮ ಏರ್ಪಡಿಸಲು ಹಮಾಸ್ ಪಾಲಿಟ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರು ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಾಮೆಲ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ.

ಹಮಾಸ್ ಪಾಲಿಟ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್
ಹಮಾಸ್ ಪಾಲಿಟ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ (IANS)

ಗಾಜಾ: ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಏರ್ಪಡಿಸಲು ನಡೆಯುತ್ತಿರುವ ಮಾತುಕತೆಗಳ ಕುರಿತು ಹಮಾಸ್ ಪಾಲಿಟ್ ಬ್ಯೂರೋ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರು ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಾಮೆಲ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಕೆಲವು ದಿನಗಳ ಹಿಂದೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹನಿಯೆಹ್ ಅವರ ಸಹೋದರಿ ಮತ್ತು ಇತರ ಸಂಬಂಧಿಕರು ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಕಾಮೆಲ್ ಶನಿವಾರ ದೂರವಾಣಿ ಕರೆಯಲ್ಲಿ ಹನಿಯೆಹ್ ಅವರಿಗೆ ಸಂತಾಪ ಸೂಚಿಸಿದ್ದಾರೆ ಎಂದು ಹಮಾಸ್ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮವನ್ನು ಒಳಗೊಂಡಿರುವ ಕೈದಿಗಳ ವಿನಿಮಯ ಒಪ್ಪಂದದ ಪರಿಷ್ಕೃತ ಆವೃತ್ತಿಯನ್ನು ಅಮೆರಿಕ ಸರ್ಕಾರವು ಪ್ರಸ್ತುತಪಡಿಸಿದೆ ಎಂದು ಇಸ್ರೇಲ್​ನ ಹೀಬ್ರೂ ಭಾಷೆಯ ಸಾರ್ವಜನಿಕ ರೇಡಿಯೋ ಕಾನ್ ವರದಿ ಮಾಡಿತ್ತು. ಅದಾದ ನಂತರ ಈಗ ಕದನ ವಿರಾಮ ಏರ್ಪಡಿಸಲು ಹಮಾಸ್​ ಮುಖ್ಯಸ್ಥ ಮತ್ತು ಈಜಿಪ್ಟ್​ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಾಮೆಲ್ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿರುವುದು ಗಮನಾರ್ಹ.

ಹೊಸ ಕದನ ವಿರಾಮ ಪ್ರಸ್ತಾಪವು ಆಗಿನ ಇಸ್ರೇಲಿ ಯುದ್ಧ ಕ್ಯಾಬಿನೆಟ್ ಅನುಮೋದಿಸಿದ ಮತ್ತು ಕಳೆದ ತಿಂಗಳು ಯುಎಸ್ ಅಧ್ಯಕ್ಷ ಜೋ ಬೈಡನ್ ಮಂಡಿಸಿದ ಪ್ರಸ್ತಾಪವನ್ನು ಆಧರಿಸಿದೆ ಎಂದು ರೇಡಿಯೋ ವರದಿ ತಿಳಿಸಿದೆ.

ಇಸ್ರೇಲ್​ನೊಂದಿಗಿನ ಕೈದಿಗಳ ವಿನಿಮಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಮಾಸ್​ಗೆ ಯುಎಸ್​ನಿಂದ ಹೊಸ ಸಂದೇಶ ಬಂದಿದೆ ಎಂದು ಹಮಾಸ್ ಮೂಲಗಳು ಶುಕ್ರವಾರ ತಿಳಿಸಿವೆ. ಗಾಜಾದಲ್ಲಿ ಕದನ ವಿರಾಮಕ್ಕಾಗಿ ಮಾತುಕತೆಗಳನ್ನು ಮುಂದುವರಿಸಲು ಮಧ್ಯವರ್ತಿಗಳ ಮೂಲಕ ಸಂದೇಶವನ್ನು ರವಾನಿಸಲಾಗಿದೆ ಎಂದು ಅದು ಉಲ್ಲೇಖಿಸಿದೆ.

2023 ರ ಡಿಸೆಂಬರ್ ಆರಂಭದವರೆಗೆ ಒಂದು ವಾರ ಕಾಲ ನಡೆದ ಮೊದಲ ಕದನ ವಿರಾಮದ ನಂತರ, ಯುನೈಟೆಡ್ ಸ್ಟೇಟ್ಸ್ ಜೊತೆಗೆ ಕತಾರ್ ಮತ್ತು ಈಜಿಪ್ಟ್ ಮಧ್ಯವರ್ತಿಗಳು ಕೈದಿಗಳ ವಿನಿಮಯ ಒಪ್ಪಂದ ಮತ್ತು ಇಸ್ರೇಲ್ ಮತ್ತು ಹಮಾಸ್ ನಡುವೆ ಎರಡನೇ ಕದನ ವಿರಾಮವನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲಿ ಗಡಿಯಲ್ಲಿ ಹಮಾಸ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದಲ್ಲಿ ಹಮಾಸ್ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ನಡೆಸುತ್ತಿದೆ.

ಇದನ್ನೂ ಓದಿ : ಗಾಜಾ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್: 40 ಪ್ಯಾಲೆಸ್ಟೈನಿಯರ ಸಾವು, 224 ಜನರಿಗೆ ಗಾಯ - Israeli Attacks In Gaza

ABOUT THE AUTHOR

...view details