ಜೆರುಸಲೇಂ(ಇಸ್ರೇಲ್): ಅಮೆರಿಕವು ಇತ್ತೀಚೆಗೆ ಎಂಕೆ-84 ಬಾಂಬ್ಗಳ ಪೂರೈಕೆಯ ಮೇಲಿನ ತಾತ್ಕಾಲಿಕ ನಿಷೇಧವನ್ನು ತೆಗೆದುಹಾಕಿದ ನಂತರ, ಅಮೆರಿಕವು ಇಸ್ರೇಲ್ಗೆ ಭಾರಿ ತೂಕದ ಎಂಕೆ-84 ಬಾಂಬ್‌ಗಳನ್ನು ಕಳುಹಿಸಿಕೊಟ್ಟಿದೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ತಿಳಿಸಿದೆ. ಎಂಕೆ-84 ಇದು 907 ಕೆಜಿ ತೂಕದ ಮಾರ್ಗದರ್ಶಿಯಲ್ಲದ ಬಾಂಬ್ ಆಗಿದ್ದು, ರಿ ಇನ್ಫೋರ್ಸ್ಡ್ ಗುರಿಗಳನ್ನು ಭೇದಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ತನ್ನ ಬಲವಾದ ಸ್ಫೋಟಕ ಶಕ್ತಿಯಿಂದ ವ್ಯಾಪಕ ಹಾನಿಯನ್ನುಂಟು ಮಾಡುತ್ತದೆ.
ಈ ಶಸ್ತ್ರಾಸ್ತ್ರಗಳನ್ನು ಹೊತ್ತ ಹಡಗು ಶನಿವಾರ ತಡರಾತ್ರಿ ಇಸ್ರೇಲಿನ ಅಶ್ದೋಡ್ ಬಂದರಿಗೆ ತಲುಪಿದೆ. ರಾತ್ರಿಯಿಡೀ ಈ ಹಡಗಿನಿಂದ ಶಸ್ತ್ರಾಸ್ತ್ರಗಳನ್ನು ಇಳಿಸಲಾಯಿತು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಚಿವಾಲಯ ಬಿಡುಗಡೆ ಮಾಡಿದ ವೀಡಿಯೊ ದೃಶ್ಯಾವಳಿಗಳಲ್ಲಿ ಹಡಗು ಕಂಟೇನರ್ಗಳನ್ನು ಡಜನ್ಗಟ್ಟಲೆ ಟ್ರಕ್ಗಳಲ್ಲಿ ಲೋಡ್ ಮಾಡುತ್ತಿರುವುದು ಕಾಣಿಸಿದೆ. ಅವುಗಳನ್ನು ಇಸ್ರೇಲ್ನ ವಾಯುಪಡೆಯ ನೆಲೆಗಳಿಗೆ ಸಾಗಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಜಾ ಪಟ್ಟಿಯ ಜನನಿಬಿಡ ಪ್ರದೇಶಗಳಲ್ಲಿ ಈ ಬಾಂಬ್ಗಳ ಸಂಭಾವ್ಯ ಬಳಕೆಯಿಂದಾಗಬಹುದಾದ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಆಡಳಿತಾವಧಿಯಲ್ಲಿ ಇಸ್ರೇಲ್ಗೆ ಈ ಬಾಂಬ್ಗಳ ಪೂರೈಕೆಯನ್ನು ನಿಲ್ಲಿಸಲಾಗಿತ್ತು.
ಈ ಬಾಂಬ್ಗಳು ಇಸ್ರೇಲಿ ವಾಯುಪಡೆ ಮತ್ತು ಐಡಿಎಫ್ (ಇಸ್ರೇಲ್ ರಕ್ಷಣಾ ಪಡೆಗಳು) ಗಳ ಮಹತ್ವದ ಶಸ್ತ್ರಾಸ್ತ್ರಗಳಾಗಿವೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಬಾಂಬ್‌ಗಳನ್ನು ಪೂರೈಕೆ ಮಾಡಿದ್ದಕ್ಕಾಗಿ ಮತ್ತು ಇಸ್ರೇಲ್ಗೆ ಅಚಲ ಬೆಂಬಲ ನೀಡಿದ್ದಕ್ಕಾಗಿ ಅವರು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಆಡಳಿತಕ್ಕೆ ಧನ್ಯವಾದ ಅರ್ಪಿಸಿದರು.
ಲೆಬನಾನ್ನಿಂದ ಹಿಂದೆ ಸರಿಯಲು ಇಸ್ರೇಲ್ಗೆ ಗಡುವು: ಫೆಬ್ರವರಿ 18ರ ಗಡುವಿನೊಳಗೆ ಇಸ್ರೇಲಿ ಪಡೆಗಳು ಲೆಬನಾನ್ ಭೂಪ್ರದೇಶದಿಂದ ಸಂಪೂರ್ಣವಾಗಿ ಹಿಂದೆ ಸರಿಯಬೇಕು ಎಂದು ಲೆಬನಾನ್ನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಮುಖ್ಯಸ್ಥರು ಭಾನುವಾರ ಹೇಳಿದ್ದಾರೆ. ದಕ್ಷಿಣ ಲೆಬನಾನ್ ನ ಯಾವುದೇ ಪೋಸ್ಟ್ ನಲ್ಲಿ ಮಿಲಿಟರಿ ನಿಯೋಜನೆಯನ್ನು ಮುಂದುವರೆಸಲು ಇಸ್ರೇಲ್ಗೆ ಯಾವುದೇ ಕಾರಣಗಳಿಲ್ಲ ಎಂದು ಅವರು ಹೇಳಿದರು.
ನವೆಂಬರ್ನಲ್ಲಿ ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮದ ಅಡಿಯಲ್ಲಿ, ದಕ್ಷಿಣ ಲೆಬನಾನ್ನಿಂದ ಹಿಂದೆ ಸರಿಯಲು ಇಸ್ರೇಲ್ ಪಡೆಗಳಿಗೆ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಆ ಗಡುವನ್ನು ನಂತರ ಫೆಬ್ರವರಿ 18ರವರೆಗೆ ವಿಸ್ತರಿಸಲಾಯಿತು. ಆದರೆ ಇಸ್ರೇಲ್ ಮಿಲಿಟರಿ ದಕ್ಷಿಣ ಲೆಬನಾನ್ನ ಐದು ಪೋಸ್ಟ್ಗಳಲ್ಲಿ ಸೈನ್ಯವನ್ನು ಉಳಿಸಿಕೊಳ್ಳಲು ವಿನಂತಿಸಿದೆ ಎಂದು ಮೂಲಗಳು ಕಳೆದ ವಾರ ರಾಯಿಟರ್ಸ್‌ಗೆ ತಿಳಿಸಿವೆ.
ಇದನ್ನೂ ಓದಿ: ಮೌಂಟ್ ಫ್ಯೂಜಿಯಲ್ಲಿ ಫೆ.25ರಿಂದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ - INDIA JAPAN MILITARY EXERCISE