ಸ್ಟಾಕ್ ಹೋಮ್:ಗೂಗಲ್ ಡೀಪ್ ಮೈಂಡ್ ಕಂಪನಿಯ ಇಬ್ಬರು ವಿಜ್ಞಾನಿಗಳಾದ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ.ಜಂಪರ್ ಸೇರಿದಂತೆ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಡೇವಿಡ್ ಬೇಕರ್ ಅವರು 2024ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರೋಟಿನ್ ವಿನ್ಯಾಸ ಮತ್ತು ರಚನೆಯ ಸಂಶೋಧನೆಗಾಗಿ ಈ ವಿಜ್ಞಾನಿಗಳಿಗೆ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
"ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ 2024ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಡೇವಿಡ್ ಬೇಕರ್ ಅವರಿಗೆ 'ಕಂಪ್ಯೂಟೇಶನಲ್ ಪ್ರೋಟಿನ್ ವಿನ್ಯಾಸಕ್ಕಾಗಿ' ಮತ್ತು ಇನ್ನರ್ಧವನ್ನು ಜಂಟಿಯಾಗಿ ಡೆಮಿಸ್ ಹಸ್ಸಾಬಿಸ್ ಮತ್ತು ಜಾನ್ ಎಂ.ಜಂಪರ್ ಅವರಿಗೆ 'ಪ್ರೋಟಿನ್ ರಚನೆಯ ಮುನ್ಸೂಚನೆಗಾಗಿ' ನೀಡಲು ನಿರ್ಧರಿಸಿದೆ" ಎಂದು ಅಕಾಡೆಮಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಹಸ್ಸಾಬಿಸ್ ಪ್ರಸ್ತುತ ಯುಕೆಯಲ್ಲಿ ಗೂಗಲ್ ಡೀಪ್ ಮೈಂಡ್ ನ ಸಿಇಒ ಆಗಿದ್ದಾರೆ ಮತ್ತು ಜಂಪರ್ ಗೂಗಲ್ ಡೀಪ್ ಮೈಂಡ್ನಲ್ಲಿ ಹಿರಿಯ ಸಂಶೋಧನಾ ವಿಜ್ಞಾನಿಯಾಗಿದ್ದಾರೆ.
ಯುಎಸ್ನ ಬೇಕರ್ ಸಂಪೂರ್ಣವಾಗಿ ಹೊಸ ರೀತಿಯ ಪ್ರೋಟೀನ್ಗಳನ್ನು ನಿರ್ಮಿಸುವ ಅಸಾಧ್ಯವಾದುದನ್ನು ಸಾಧಿಸಿದ್ದರೆ, ಯುಕೆಯ ಹಸ್ಸಾಬಿಸ್ ಮತ್ತು ಜಂಪರ್ ಪ್ರೋಟೀನ್ಗಳ ಸಂಕೀರ್ಣ ರಚನೆಗಳನ್ನು ಊಹಿಸುವಂಥ ಎಐ ಮಾದರಿಯನ್ನು ತಯಾರಿಸಿದ್ದು, 50 ವರ್ಷಗಳ ಹಳೆಯ ಸಮಸ್ಯೆಯನ್ನು ಪರಿಹರಿಸಲು ನೆರವಾಗಿದ್ದಾರೆ.