ಕಠ್ಮಂಡು/ನವದೆಹಲಿ: ಟಿಬೆಟ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 95ಕ್ಕೆ ಏರಿದೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಮಧ್ನಾಹ್ನದ ವೇಳೆಗೆ 95 ಜನ ಮೃತಪಟ್ಟಿರುವುದು ದೃಢಪಟ್ಟಿದೆ ಮತ್ತು 130 ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಇಂದು ಬೆಳಗ್ಗೆ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆ ದಾಖಲಾಗಿದೆ.
62 ಜನ ವಾಸವಿರುವ ಟಿಬೆಟ್, ಮೌಂಟ್ ಎವರೆಸ್ಟ್ನ ಚೀನಾ ಬದಿಯಲ್ಲಿದೆ. ಈ ಪರ್ವತ ಶ್ರೇಣಿಯಲ್ಲಿ ಭೂಕಂಪನ ಸಂಭವಿಸುವುದು ಸಾಮಾನ್ಯ. ಆದರೆ ಇಲ್ಲಿನ 200 ಕಿಮೀ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳಲ್ಲಿ ಇಂದು ಸಂಭವಿಸಿದ ಕಂಪನ ಅತಿ ಪ್ರಬಲವಾಗಿದೆ ಎಂದು ವರದಿಯಾಗಿದೆ.
ಹಿಮಾಲಯ ಪ್ರದೇಶ ವ್ಯಾಪ್ತಿಯ ಮೌಂಟ್ ಎವರೆಸ್ಟ್ ಪರ್ವತಕ್ಕೆ ಸಮೀಪದಲ್ಲಿರುವ ಭೂಪ್ರದೇಶದಲ್ಲಿ ಕಂಪನದ ಅನುಭವವಾಗಿದೆ.
ಕಠ್ಮಂಡುನಲ್ಲೂ ಕಂಪನ:ಪ್ರಬಲ ಭೂಕಂಪನ ನೇಪಾಳದಲ್ಲೂ ಭೀತಿ ಉಂಟು ಮಾಡಿದೆ. ನೇಪಾಳದ ರಾಜಧಾನಿ ಕಠ್ಮಂಡುನಲ್ಲಿ ಭೂಮಿ ಕಂಪಿಸುತ್ತಿದ್ದಂತೆ ಜನರು ಮನೆಯಿಂದ ಹೊರಗೆ ಓಡಿಬಂದಿದ್ದರು.
ನೇಪಾಳದ ಲಾಬ್ಚೆ ಎಂಬಲ್ಲಿಂದ ಸುಮಾರು 93 ಕಿಲೋ ಮೀಟರ್ ದೂರದ ಚೀನಾದ ಟಿಬೆಟ್‌ನಲ್ಲಿ ವ್ಯಾಪಿಸಿರುವ ಪರ್ವತ ಗಡಿ ಪ್ರದೇಶಗಳಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ ಎಂದು ಯುಎಸ್ ಜಿಯಾಲಾಜಿಕಲ್ ಸರ್ವೇ ಮಾಹಿತಿ ನೀಡಿದೆ. ಇಲ್ಲಿಂದ ಸುಮಾರು 200 ಕಿಲೋ ಮೀಟರ್ ದೂರದ ದೇಶದ ಆಗ್ನೇಯ ದಿಕ್ಕಿನಲ್ಲಿರುವ ಕಠ್ಮಂಡುವಿನಲ್ಲಿ ಕಟ್ಟಡಗಳು ನಡುಗಿವೆ. ಭೂಮಿಯ 10 ಕಿಲೋ ಮೀಟರ್ ಆಳದಲ್ಲಿ ಕಂಪನ ಉಂಟಾಗಿದೆ ಎಂದು ತಿಳಿದು ಬಂದಿದೆ.
ಭೂಕಂಪನದಿಂದ ತಕ್ಷಣಕ್ಕೆ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟದ ಕುರಿತು ಯಾವುದೇ ವರದಿಯಾಗಿಲ್ಲ. ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಬಂದಿದ್ದರು ಎಂದು ವರದಿಯಾಗಿದೆ.
ಭಾರತದಲ್ಲೂ ಭೂಕಂಪನ: ಭೂಕಂಪನದ ತೀವ್ರತೆ ಉತ್ತರ ಭಾರತದ ಕೆಲವೆಡೆ ಕಂಡುಬಂದಿದೆ. ದೆಹಲಿ ಎನ್‌ಸಿಆರ್, ಬಿಹಾರ, ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಇದರಿಂದಾಗಿ ಜನರು ಹೆದರಿ ಕೆಲಕಾಲ ಮನೆಯಿಂದ ಹೊರಗೆ ಬಂದು ನಿಂತಿದ್ದರು.
ಇದನ್ನೂ ಓದಿ:ಕಾಶ್ಮೀರದಲ್ಲಿ ಪ್ರಾಣಾಂತಕವಾದ ಚಳಿ: ಸಾವಿನ ಸಂಖ್ಯೆ 11ಕ್ಕೆ ಏರಿಕೆ: ಉಸಿರುಗಟ್ಟಿ ಒಂದೇ ಕುಟುಂಬದ ಐವರು ಸಾವು