ಇಸ್ಲಾಮಾಬಾದ್: ಉಮ್ರಾ ಮತ್ತು ಹಜ್ ವೀಸಾದಡಿ ಭಿಕ್ಷುಕರು ಸೌದಿ ಅರೇಬಿಯಾಕ್ಕೆ ಬರುತ್ತಿರುವ ಬಗ್ಗೆ ಗಂಭೀರವಾಗಿ ಮತ್ತು ತುರ್ತಾಗಿ ಗಮನ ಹರಿಸುವಂತೆ ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಇಂಥ ಜನರಿಗೆ ವೀಸಾ ನೀಡದಂತೆ ಹಾಗೂ ಇವರು ಭಿಕ್ಷಾಟನೆಗಾಗಿ ತನ್ನ ದೇಶ ಪ್ರವೇಶಿಸದಂತೆ ತಡೆಯಬೇಕು ಎಂದು ಇಸ್ಲಾಮಾಬಾದ್ನ ಧಾರ್ಮಿಕ ವ್ಯವಹಾರಗಳ ಸಚಿವಾಲಯಕ್ಕೆ ಸೌದಿ ಅರೇಬಿಯಾ ಸೂಚನೆ ನೀಡಿದೆ.
ದೇಶದಲ್ಲಿ ಭಿಕ್ಷೆ ಬೇಡುತ್ತಿದ್ದ ಹಲವಾರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿ ಗಡೀಪಾರು ಮಾಡಿರುವ ಸೌದಿ ಸರ್ಕಾರ ಪಾಕಿಸ್ತಾನಕ್ಕೆ ಈ ಎಚ್ಚರಿಕೆ ನೀಡಿದೆ. ಪಾಕಿಸ್ತಾನಿ ಭಿಕ್ಷುಕರು ಉಮ್ರಾ ಮತ್ತು ಹಜ್ ವೀಸಾಗಳ ಅಡಿ ಸೌದಿಗೆ ಪ್ರವೇಶಿಸಿದ್ದರು ಮತ್ತು ಇವರು ಮೆಕ್ಕಾ, ಮದೀನಾದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ತಿಳಿದು ಬಂದಿದೆ.
ಸೌದಿ ಅರೆಬಿಯಾ ಕಳವಳ:ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಬರುವ ಪಾಕಿಸ್ತಾನಿ ಭಿಕ್ಷುಕರ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಸೌದಿ ಅರೇಬಿಯಾ ಗಂಭೀರ ಕಳವಳ ವ್ಯಕ್ತಪಡಿಸಿದೆ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಮೂಲಗಳು ದೃಢಪಡಿಸಿವೆ. ಪರಿಸ್ಥಿತಿ ನಿಯಂತ್ರಿಸದಿದ್ದರೆ, ಅದು ಪಾಕಿಸ್ತಾನದ ಉಮ್ರಾ ಮತ್ತು ಹಜ್ ಯಾತ್ರಿಕರ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸೌದಿ ಅರೇಬಿಯಾ ಎಚ್ಚರಿಸಿದೆ ಎಂದು ಮೂಲಗಳು ತಿಳಿಸಿವೆ.
ಉಮ್ರಾ ಪ್ರವಾಸಕ್ಕೆ ಅನುಕೂಲ ಮಾಡಿಕೊಡುವ ಟ್ರಾವೆಲ್ ಏಜೆನ್ಸಿಗಳನ್ನು ನಿಯಂತ್ರಿಸಲು, ವೀಸಾ ನೀಡುವ ವಿಷಯದಲ್ಲಿ ಅವುಗಳ ಮೇಲೆ ಕಾನೂನು ಮೇಲ್ವಿಚಾರಣೆ ನಡೆಸಲು ಇಸ್ಲಾಮಾಬಾದ್ನ ಧಾರ್ಮಿಕ ವ್ಯವಹಾರಗಳ ಸಚಿವಾಲಯವು 'ಉಮ್ರಾ ಕಾಯ್ದೆ' ಯನ್ನು ಜಾರಿಗೆ ತಂದಿದೆ.