ವಾಷಿಂಗ್ಟನ್:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಯತ್ನಿಸಿರುವ ಘಟನೆಯು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಕೃತ್ಯವು ಅಮೆರಿಕ ರಾಜಕೀಯ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ. ದುರ್ಘಟನೆ ಕುರಿತು ಅಮೆರಿಕದ ಸಂಯುಕ್ತ ತನಿಖಾ ದಳ (ಎಫ್‌ಬಿಐ) ತನಿಖೆಯನ್ನು ತೀವ್ರಗೊಳಿಸಿದೆ. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಗುರುತು ಪತ್ತೆ ಮಾಡಲಾಗಿದೆ.
ಕೃತ್ಯವೆಸಗಿರುವ ವ್ಯಕ್ತಿಯನ್ನು 20 ವರ್ಷದ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಎಂದು ಗುರುತಿಸಲಾಗಿದೆ. ಈತ ಪೆನ್ಸಿಲ್ವೇನಿಯಾದ ಬೆತೆಲ್ ಪಾರ್ಕ್ ಪ್ರದೇಶದವನೆಂದು ಹೇಳಲಾಗಿದೆ.
ಸರ್ಕಾರದ ಮತದಾನದ ದಾಖಲೆಗಳ ಪ್ರಕಾರ, ಆರೋಪಿಯು ರಿಪಬ್ಲಿಕನ್ ಪಕ್ಷದ ಬೆಂಬಲಿಗರಾಗಿ ನೋಂದಾಯಿಸಿಕೊಂಡಿದ್ದ. ಆದರೆ, ಆತ 2021ರಲ್ಲಿ ಡೆಮಾಕ್ರಟಿಕ್-ಸಂಯೋಜಿತ ಪ್ರೋಗ್ರೆಸ್ಸಿವ್ ಟರ್ನ್‌ಔಟ್ ಪ್ರಾಜೆಕ್ಟ್‌ಗೆ 15 ಡಾಲರ್ ದೇಣಿಗೆ ನೀಡಿದ್ದನು. ಸದ್ಯ ಕ್ರೂಕ್ಸ್ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಆರೋಪಿ ಮನೆಯಿರುವ ಆ ದಾರಿಯಲ್ಲಿ ಬರಲು ಸಾಧ್ಯವಿಲ್ಲ. ಥಾಮಸ್ ಮ್ಯಾಥ್ಯೂ ಕ್ರೂಕ್ಸ್‌ನ ಫೋಟೋಗಳು ಮತ್ತು ವಿಡಿಯೋಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೆಲವು ಮಾಧ್ಯಮಗಳು ಆತನನ್ನು ಶಂಕಿತ ಎಂದು ಹೇಳುವ ಮೊದಲು ಆರೋಪಿಯ ಫೋಟೋಗಳನ್ನು ಪ್ರಸಾರ ಮಾಡಿವೆ.
ಮತ್ತೊಂದೆಡೆ, ಗುಂಡಿನ ದಾಳಿಗೂ ಮುನ್ನ ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅದರಲ್ಲಿ 'ಐ ಹೇಟ್ ದಿ ರಿಪಬ್ಲಿಕನ್ ಪಾರ್ಟಿ ಮತ್ತು ಟ್ರಂಪ್' ಎಂದು ಹೇಳುತ್ತಿರುವಂತಿದೆ. ಟ್ರಂಪ್ ಭಾಷಣಕ್ಕೆ ಸಜ್ಜುಗೊಳಿಸಲಾಗಿದ್ದ ವೇದಿಕೆಯಿಂದ 130 ಗಜ ದೂರದಿಂದ ದಾಳಿ ನಡೆದಿದೆಯಂತೆ. ಉತ್ಪಾದನಾ ಘಟಕವೊಂದರ ಚಾವಣಿಯ ಮೇಲೆ ಕುಳಿತು ಗುಂಡಿನ ದಾಳಿ ಮಾಡಿರುವುದು ಸ್ಪಷ್ಟವಾಗಿದೆ. ತಕ್ಷಣ ಎಚ್ಚೆತ್ತ ಗುಪ್ತದಳದ ಅಧಿಕಾರಿಗಳು ಪ್ರತಿದಾಳಿ ನಡೆಸಿ ದಾಳಿಕೋರನನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತನಿಖಾ ಸಂಸ್ಥೆಗಳು ಆರೋಪಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಶಂಕಿತ ವ್ಯಕ್ತಿ ಎಆರ್ ಶ್ರೇಣಿಯ ಸೆಮಿ ಆಟೋಮ್ಯಾಟಿಕ್ ರೈಫಲ್‌ನಿಂದ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಾನೆ. ಭದ್ರತಾ ಪಡೆಗಳು ಶಸ್ತ್ರಾಸ್ತ್ರವನ್ನೂ ವಶಪಡಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸುವುದಾಗಿ ಸಂಯುಕ್ತ ತನಿಖಾ ದಳ (ಎಫ್‌ಬಿಐ) ತಿಳಿಸಿದೆ. ಚುನಾವಣಾ ರ‍್ಯಾಲಿಯಲ್ಲಿ ಭಾಗವಹಿಸಿದವರು ತಮ್ಮೊಂದಿಗೆ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಲು ಎಫ್‌ಬಿಐ ಹೇಳಿದೆ.
ಇದನ್ನೂ ಓದಿ:'ಬಲ ಕಿವಿಯ ಮೇಲ್ಭಾಗಕ್ಕೆ ಬುಲೆಟ್ ತಗುಲಿದೆ, ಜೀವ ಉಳಿಸಿದ ಭದ್ರತಾ ಸಿಬ್ಬಂದಿಗೆ ಕೃತಜ್ಞತೆ': ಡೊನಾಲ್ಡ್ ಟ್ರಂಪ್ - Donald Trump statement