ವಾಷಿಂಗ್ಟನ್(ಅಮೆರಿಕ):ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಿರುದ್ಧದ ಸಿವಿಲ್ ಪ್ರಕರಣದಲ್ಲಿ ದಂಡ ವಿಧಿಸಿ ನೀಡಿದ್ದ ಆದೇಶಕ್ಕೆ ತಡೆ ಕೋರಿ ನ್ಯೂಯಾರ್ಕ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಹೌದು ಟ್ರಂಪ್ ಹಾಗೂ ಅವರ ಇಬ್ಬರು ಮಕ್ಕಳು ಮತ್ತು ಮಾಜಿ ಟ್ರಂಪ್ ಸಂಘಟನೆಯ ಇಬ್ಬರು ಅಧಿಕಾರಿಗಳು ಸೋಮವಾರ ಸಿವಿಲ್ ವಂಚನೆ ಪ್ರಕರಣದಲ್ಲಿ ತಮ್ಮ ವಿರುದ್ಧದ 454 ಮಿಲಿಯನ್ ಅಮೆರಿಕನ್ ಡಾಲರ್ ದಂಡದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಕೋರ್ಟ್ನ ನ್ಯಾಯಾಧೀಶ ಆರ್ಥರ್ ಎಂಗೊರಾನ್ ಫೆಬ್ರವರಿ 16 ರಂದು ದಂಡದ ಜತೆಗೆ ಟ್ರಂಪ್ ಮೂರು ವರ್ಷಗಳ ಕಾಲ ಕಂಪನಿಯ ನಿರ್ದೇಶಕರಾಗುವಂತಿಲ್ಲ ಎಂಬ ನಿರ್ಬಂಧವನ್ನೂ ಹೇರಿ ಅಂತಿಮ ತೀರ್ಪು ಪ್ರಕಟಿಸಿದ್ದರು. ಈ ತೀರ್ಪನ್ನ ಪ್ರಶ್ನಿಸಿ ಡೊನಾಲ್ಡ್ ಟ್ರಂಪ್ ಮೇಲ್ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಪಿನ ಪ್ರಕಾರ ಒಟ್ಟು ಟ್ರಂಪ್ಗೆ ಬಡ್ಡಿ ಪಾವತಿ ಸೇರಿಸಿ 454 ಮಿಲಿಯನ್ ಅಮೆರಿಕ ಡಾಲರ್( ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ 3,762ಕೋಟಿ) ದಂಡ ಕಟ್ಟಬೇಕಾಗಿದೆ.
ಈಗ ಕೋರ್ಟ್ನಲ್ಲಿ ಸಲ್ಲಿಸಿರುವ ಮೇಲ್ಮನವಿಗಾಗಿ ಟ್ರಂಪ್ ಎಲ್ಲಿಂದ ಹಣ ಹೊಂದಿಸಿದ್ದಾರೆ ಎಂಬ ಮಾಹಿತಿ ಇಲ್ಲ. ವಿಧಿಸಿರುವ 355 ಮಿಲಿಯನ್ ಡಾಲರ್ ಹಣಕ್ಕೆ 100 ಮಿಲಿಯನ್ ನಷ್ಟು ಹೆಚ್ಚುವರಿ ಬಡ್ಡಿ ಪಾವತಿಸಲು ನಗದು ಅಥವಾ ಪೋಸ್ಟ್-ಬಾಂಡ್ ಹಾಕಬೇಕಾಗುತ್ತದೆ ಎಂದು ಅಧಿಕೃತ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿದೆ. ಇನ್ನು ಅವರ ಪುತ್ರ ಈ ಪ್ರಕರಣದಲ್ಲಿ ಲಾಭ ಪಡೆದಿರುವುದಕ್ಕಾಗಿ ಆತನಿಗೂ 4 ಮಿಲಿಯನ್ ಡಾಲರ್ ದಂಡ ಕಟ್ಟಲು ಆದೇಶಿಸಲಾಗಿತ್ತು.