ದಕ್ಷಿಣ ಕರೊಲಿನಾ (ಅಮೆರಿಕ): ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಅವರು ಸ್ಪರ್ಧೆಯಲ್ಲಿ ಮುಂದುವರೆಯಲು ನಿರ್ಧರಿಸಿದ್ದಾರೆ. ಶನಿವಾರ ಪ್ರಾಥಮಿಕ ಸಮೀಕ್ಷೆಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಹೀಗಿದ್ದರು ಕೂಡಾ ವೈಟ್ ಔಸ್ ರೇಸ್ನಲ್ಲಿ ಉಳಿದುಕೊಳ್ಳುವುದಾಗಿ ಹ್ಯಾಲೆ ಪ್ರತಿಜ್ಞೆ ಮಾಡಿದ್ದಾರೆ.
ಸೌತ್ ಕರೊಲಿನಾದಲ್ಲಿ ಎರಡು ಬಾರಿ ಗವರ್ನರ್ ಆಗಿ ಸೇವೆ ಸಲ್ಲಿಸಿರುವ ಹ್ಯಾಲೆ ಗ್ರೀನ್ಸ್‌ವಿಲ್ಲೆ ಸಿಟಿಯಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ದಕ್ಷಿಣ ಕರೊಲಿನಾದ ಮಾಜಿ ಗವರ್ನರ್ "ಎಲ್ಲಿಯೂ ಹೋಗುತ್ತಿಲ್ಲ" ಮತ್ತು "ಕೊನೆಯ ಮತ ಚಲಾವಣೆವರೆಗೂ" ತಮ್ಮ ಪ್ರಯತ್ನವನ್ನು ಮುಂದುವರೆಸುತ್ತೇನೆ ಎಂದು ಒತ್ತಿ ಹೇಳಿದ್ದಾರೆ. 'ಹ್ಯಾಲೆ ಶೀಘ್ರದಲ್ಲೇ ರೇಸ್‌ನಿಂದ ಹೊರಗುಳಿಯಬಹುದು' ಎಂಬ ಊಹಾಪೋಹಗಳ ನಂತರ ನಿಕ್ಕಿ ಹ್ಯಾಲೆ ಈ ಸ್ಪಷ್ಟನೆ ನೀಡಿದ್ದಾರೆ.
ನಿಮ್ಮಲ್ಲಿ ಕೆಲವರು ನಾನು ರೇಸ್‌ನಿಂದ ಹೊರಗುಳಿಯುತ್ತಿದ್ದೇನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಲ್ಲಿಗೆ ಬಂದಿದ್ದೀರಿ. ಸರಿ, ನಾನು ರೇಸ್‌ನಿಂದ ಹೊರ ಹೋಗುತ್ತಿಲ್ಲ. ಆ ವಿಚಾರದಿಂದ ಬಹಳ ದೂರ ಇದ್ದೇನೆ ಎಂದು ಸ್ಪಷ್ಟಪಡಿಸಿದರು. ದಕ್ಷಿಣ ಕರೊಲಿನಾದ ಮಾಜಿ ಗವರ್ನರ್ ಆದ ಹ್ಯಾಲೆ ಅವರು ಕಠಿಣ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಫ್ಲೋರಿಡಾ ಗವರ್ನರ್ ರೊನ್ ಡಿಸಾಂಟಿಸ್ ಅವರು ಜನವರಿಯಲ್ಲಿ ತಮ್ಮ ಪ್ರಚಾರವನ್ನು ಸ್ಥಗಿತಗೊಳಿಸಿದಾಗಿನಿಂದ ಟ್ರಂಪ್ ಮತ್ತು ಹ್ಯಾಲೆ ಮುಖಾಮುಖಿ ಸ್ಪರ್ಧೆಯಲ್ಲಿದ್ದಾರೆ.