ಅಬುಜಾ (ನೈಜೀರಿಯಾ): ಉತ್ತರ - ಮಧ್ಯ ನೈಜೀರಿಯಾದಲ್ಲಿ ಶುಕ್ರವಾರ ಬೆಳಗಿನ ಜಾವ ಭಾರಿ ದುರಂತವೊಂದು ಸಂಭವಿಸಿದೆ. ತರಗತಿ ನಡೆಯುತ್ತಿದ್ದ ವೇಳೆ ಎರಡು ಅಂತಸ್ತಿನ ಶಾಲಾ ಕಟ್ಟಡ ಕುಸಿದು 22 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇದರ ಅವಶೇಷಗಳಲ್ಲಿ ಸಿಲುಕಿರುವ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಜನರಿಗಾಗಿ ತೀವ್ರ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಬುಸಾ ಬುಜಿ ಸಮುದಾಯದಲ್ಲಿರುವ ಸೇಂಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ತರಗತಿಗಳಿಗೆ ಆಗಮಿಸಿದ ಕೆಲವೇ ಗಂಟೆಗಳಲ್ಲಿ ಈ ಕಟ್ಟಡ ಕುಸಿತ ಕಂಡಿದೆ. ಒಟ್ಟು 154 ವಿದ್ಯಾರ್ಥಿಗಳು ಶಾಲಾ ಕಟ್ಟಡದ ಅವಶೇಷಗಳ ಅಡಿ ಸಿಕ್ಕಿಬಿದ್ದಿದ್ದಾರೆ. ಇದರಲ್ಲಿ 132 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಪ್ರಸ್ಥಭೂಮಿ ಪೊಲೀಸ್ ವಕ್ತಾರ ಆಲ್ಫ್ರೆಡ್ ಅಲಾಬೊ ತಿಳಿಸಿದ್ದಾರೆ. 22 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಕ್ಷಣಾ ಮತ್ತು ಆರೋಗ್ಯ ಕಾರ್ಯಕರ್ತರು ಹಾಗೂ ಭದ್ರತಾ ಪಡೆಗಳು ಧಾವಿಸಿದವು ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ. ತ್ವರಿತ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳು ಆರೋಗ್ಯ ಸಿಬ್ಬಂದಿಗೆ ಅಲ್ಲಿನ ಸರ್ಕಾರ ಸೂಚಿಸಿದೆ. ಉಚಿತ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಸರ್ಕಾರವು ಆಸ್ಪತ್ರೆಗಳಿಗೆ ಸೂಚನೆ ನೀಡಿದೆ ಎಂದು ಅಲ್ಲಿನ ಮಾಹಿತಿ ಆಯುಕ್ತ ಮೂಸಾ ಆಶೋಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.