ಲಾಸ್ ಏಂಜಲೀಸ್ (ಅಮೆರಿಕ):ಸೂಪರ್ ಪವರ್ ಆಗಿರುವ ಅಮೆರಿಕದಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ರಂಗೇರುತ್ತಿದೆ. ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪ್ರಚಾರವೂ ತೀವ್ರಗೊಂಡಿದೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥರಾದ ಬಿಲಿಯನೇರ್ ಎಲಾನ್ ಮಸ್ಕ್ ನಡೆಸಿದ ಸಂದರ್ಶನದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು, ಡೆಮಾಕ್ರಟಿಕ್ಅಭ್ಯರ್ಥಿಗಳನ್ನು ಟೀಕಿಸುವುದರಿಂದ ಹಿಡಿದು ಅಮೆರಿಕದ ಪ್ರತಿಸ್ಪರ್ಧಿ ರಾಷ್ಟ್ರಗಳನ್ನು ಹೊಗಳುವುದರವರೆಗೆ ಹಲವು ಮಹತ್ವದ ವಿಷಯಗಳನ್ನು ಕುರಿತು ಮಾತನಾಡಿದ್ದಾರೆ.
ಡೊನಾಲ್ಡ್ ಟ್ರಂಪ್ ಸಂದರ್ಶನದ ಆಯ್ದ ಭಾಗ:"ಇತ್ತೀಚೆಗೆ ನಾನು ಬೈಡನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇದು ನನ್ನ ಶ್ರೇಷ್ಠ ಚರ್ಚೆಗಳಲ್ಲಿ ಒಂದಾಗಿದೆ ಎಂದು ನಾನು ಭಾವಿಸುತ್ತೇನೆ. ಆ ಚರ್ಚೆಯಲ್ಲಿ ಅವರು ಹೀನಾಯವಾಗಿ ಸೋತಿದ್ದರು. ಪರಿಣಾಮವಾಗಿ, ಅವರನ್ನು ಅಧ್ಯಕ್ಷೀಯ ರೇಸ್‌ನಿಂದ ಹೊರಹಾಕಲಾಯಿತು. ತಮ್ಮ ಪಕ್ಷದಲ್ಲಿನ ಬಂಡಾಯದಿಂದಾಗಿ ಬೈಡನ್ ಕೆಳಗಿಳಿಯಬೇಕಾಯಿತು" ಎಂದು ಟ್ರಂಪ್ ಟೀಕಿಸಿದರು.
ಪುಟಿನ್, ಕ್ಸಿ ಜಿನ್‌ಪಿಂಗ್, ಕಿಮ್ ದೇಶವನ್ನು ತುಂಬಾ ಪ್ರೀತಿಸುತ್ತಾರೆ:"ವ್ಲಾಡಿಮಿರ್ ಪುಟಿನ್ (ರಷ್ಯಾದ ಅಧ್ಯಕ್ಷ), ಕ್ಸಿ ಜಿನ್‌ಪಿಂಗ್ (ಚೀನಾ ಅಧ್ಯಕ್ಷ), ಕಿಮ್ ಜಾಂಗ್ ಉನ್ (ಉತ್ತರ ಕೊರಿಯಾದ ಅಧ್ಯಕ್ಷ) ತಮ್ಮ ತಮ್ಮ ದೇಶಗಳ ಪರ ಚೆನ್ನಾಗಿ ಆಟ ಆಡುತ್ತಿದ್ದು, ಅವರು ಅಗ್ರಸ್ಥಾನದಲ್ಲಿದ್ದಾರೆ. ಅವರೆಲ್ಲರೂ ತಮ್ಮ ದೇಶಗಳನ್ನು ತುಂಬಾ ಪ್ರೀತಿಸುತ್ತಾರೆ. ಆದರೆ, ಅವರದು ಬೇರೆ ರೀತಿಯ ಪ್ರೀತಿ. ಅವರನ್ನು ಎದುರಿಸಲು ಅಮೆರಿಕಕ್ಕೆ ಬಲಿಷ್ಠ ಅಧ್ಯಕ್ಷರ ಅಗತ್ಯವಿದೆ. ಬೈಡನ್ ಅಧ್ಯಕ್ಷರಾಗಿರದಿದ್ದರೆ, ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಿರಲಿಲ್ಲ. ಪುಟಿನ್ ಜೊತೆ ಹಲವು ಬಾರಿ ಮಾತನಾಡಿದೆ. ಅವರು ನನ್ನನ್ನು ತುಂಬಾ ಗೌರವಿಸುತ್ತಾರೆ. ನಾವು ಉಕ್ರೇನ್ ಬಗ್ಗೆಯೂ ಚರ್ಚಿಸಿದ್ದೇವೆ'' ಎಂದು ಟ್ರಂಪ್ ಹೇಳಿದರು.
ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ: ಈ ಸಂದರ್ಭದಲ್ಲಿ ಡೆಮಾಕ್ರಟಿಕ್ ಪಕ್ಷದ ಪರವಾಗಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದರು. ''ನಮಗೆ ಈಗ ಅಧ್ಯಕ್ಷರೇ ಇಲ್ಲದಂತಾಗಿದೆ. ಕಮಲಾ ಹ್ಯಾರಿಸ್ ಬಂದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ಅವರು ಗೆದ್ದರೆ ನಮ್ಮ ದೇಶವನ್ನು ನಾಶ ಮಾಡುತ್ತಾರೆ. ಅವರು ಅಧಿಕಾರಕ್ಕೆ ಬಂದರೆ, 50 ರಿಂದ 60 ಮಿಲಿಯನ್ ಅಕ್ರಮ ವಲಸಿಗರು ದೇಶವನ್ನು ಪ್ರವೇಶಿಸುತ್ತಾರೆ. ಅವರೆಲ್ಲ ಉಗ್ರಗಾಮಿ ಸಿದ್ಧಾಂತ ಹೊಂದಿದ್ದಾರೆ. ಅಪರಾಧ ಎಸಗುವ ಸಾಧ್ಯತೆ ಇದೆ'' ಎಂದು ಆತಂಕ ವ್ಯಕ್ತಪಡಿಸಿದರು. ತಾವು ಅಧಿಕಾರಕ್ಕೆ ಬಂದರೆ ವಲಸೆ ಕಾನೂನುಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಟ್ರಂಪ್ ಈ ಸಂದರ್ಭದಲ್ಲಿ ತಿಳಿಸಿದರು. ಇತಿಹಾಸದಲ್ಲಿ ಎಂದೂ ಕಾಣದ ಗಡಿಪಾರು ಪ್ರಕ್ರಿಯೆ ನಡೆಸುವುದಾಗಿ ಭರವಸೆ ನೀಡಿದರು. ಅಮೆರಿಕನ್ನರ ಕನಸುಗಳನ್ನು ನನಸು ಮಾಡಿ ಉದ್ಯೋಗ ಸೃಷ್ಟಿಸುವುದಾಗಿ ಅಭಯ ನೀಡಿದರು.