ಕೆನಡಾ: ಕೆನಡಾದಲ್ಲಿ ಹಿಂದೂ ದೇಗುಲದ ಮೇಲೆ ಮತ್ತೆ ದಾಳಿ ನಡೆದಿದೆ. ಎಡ್ಮಂಟನ್‌ನಲ್ಲಿರುವ ಬಿಎಪಿಎಸ್ ಸ್ವಾಮಿ ನಾರಾಯಣ ಮಂದಿರವನ್ನು ಈ ಬಾರಿ ದುಷ್ಕರ್ಮಿಗಳು ಗುರಿಯಾಗಿಸಿಕೊಂಡಿದ್ದಾರೆ. ಹಿಂದು ಮತ್ತು ಕೆನಡಿಯನ್ ಸಮುದಾಯದ ನಡುವೆ ದ್ವೇಷ ಉತ್ತೇಜಿಸುವುದು ಇದರ ಹಿಂದಿನ ಉದ್ದೇಶ ಎಂದು ನೇಪಿಯನ್ ಸಂಸತ್ ಸದಸ್ಯ ಚಂದ್ರ ಆರ್ಯ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಚಂದ್ರ ಆರ್ಯ, ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಮೇಲೆ ಬರಹಗಳನ್ನು ಗೀಚಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗ್ರೇಟರ್ ಟೊರೊಂಟೊ ಪ್ರದೇಶ, ಬ್ರಿಟಿಷ್ ಕೊಲಂಬಿಯಾ ಮತ್ತು ಕೆನಡಾದ ಇತರ ಪ್ರದೇಶಗಳಲ್ಲೂ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ದೇಗುಲಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಕಳೆದ ವರ್ಷ ವಿಂಡ್ಸರ್‌ನಲ್ಲಿರುವ ಹಿಂದೂ ದೇವಾಲಯದಲ್ಲಿ ಭಾರತ ವಿರೋಧಿಗಳು ಗೋಡೆ ಬರಹಗಳ ಮೂಲಕ ವಿರೂಪಗೊಳಿಸಲಾಗಿತ್ತು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಕೆನಡಾದ ಅಧಿಕಾರಿಗಳು ಕೂಡ ವಿರುದ್ಧ ಕ್ರಮಕ್ಕೆ ಮುಂದಾಗಿದ್ದರು. ಮಿಸ್ಸಿಸೌಗಾ ಮತ್ತು ಬ್ರಾಂಪ್ಟನ್‌ನಲ್ಲೂ ಭಾರತೀಯ ಕೆನಡಾ ಸಮುದಾಯವನ್ನು ಘಾಸಿಗೊಳಿಸುವ ಘಟನೆಗಳು ನಡೆದಿದ್ದವು.
ಇಂಥ ದುಷ್ಕೃತ್ಯಗಳನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೆನಡಾದ ಎಲ್ಲಾ ಧಾರ್ಮಿಕ ಸಮುದಾಯಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಒತ್ತಾಯಿಸಲಾಗಿದೆ. ಈ ಘಟನೆಗಳು ದೇವಾಲಯಗಳ ಸುತ್ತ ಭದ್ರತಾ ಕ್ರಮಗಳನ್ನು ಬಲಪಡಿಸುವ ಬಗ್ಗೆ ಮತ್ತು ಉಗ್ರಗಾಮಿ ಪ್ರಚಾರವನ್ನು ಎದುರಿಸುವ ಪ್ರಯತ್ನಗಳನ್ನು ಹೆಚ್ಚಿಸುವ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ:ಭದ್ರತಾ ಪಡೆಗಳಿಂದ ಬಲೂಚಿ ನಾಗರಿಕರ ಅಪಹರಣ; ಪಾಕಿಸ್ತಾನ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರ