ವಾಷಿಂಗ್ಟನ್, ಅಮೆರಿಕ: ಬಾಂಗ್ಲಾದೇಶದಲ್ಲಿ ನಿವೃತ್ತ ಯೋಧರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದ ಪ್ರಧಾನಿ ಶೇಖ್ ಹಸೀನಾ ಹಠಾತ್ ರಾಜೀನಾಮೆ ನೀಡಿದ್ದು, ದೇಶದ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ಪ್ರಜಾಪ್ರಭುತ್ವ ತತ್ವಗಳು, ಕಾನೂನು ನಿಯಮ ಹಾಗೂ ಬಾಂಗ್ಲಾದೇಶದ ಜನರ ಇಚ್ಛೆಗೆ ಅನುಗುಣವಾಗಿ ರಚಿಸಬೇಕು ಎಂದು ಜೋ ಬೈಡನ್ ಆಡಳಿತ ಹೇಳಿದೆ.
ಬಾಂಗ್ಲಾ ಜನತೆ ದೇಶದ ಸರ್ಕಾರದ ಭವಿಷ್ಯವನ್ನು ನಿರ್ಧರಿಸುವುದನ್ನು ನಾವು ನೋಡಲು ಬಯಸುತ್ತೇವೆ. ಅಮೆರಿಕ ಸರ್ಕಾರವು ಬಾಂಗ್ಲಾದೇಶದ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಹಾಗೇ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸಲು ಕರೆ ನೀಡುತ್ತೇವೆ ಎಂದು ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಿಲ್ಲರ್ ಮುಂದುವರೆದು, ಈಗ ತೆಗೆದುಕೊಳ್ಳುತ್ತಿರುವ ಮಧ್ಯಂತರ ಸರ್ಕಾರದ ಬಗ್ಗೆ ಎಲ್ಲ ನಿರ್ಧಾರಗಳನ್ನು ಪ್ರಜಾಪ್ರಭುತ್ವದ ತತ್ವಗಳು ಮತ್ತು ಕಾನೂನಿನ ನಿಯಮ ಮತ್ತು ಬಾಂಗ್ಲಾದೇಶದ ಜನರ ಇಚ್ಛೆಗೆ ಸಂಬಂಧಿಸಿದಂತೆ ತೆಗೆದುಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ದೇಶದಲ್ಲಿ ನಡೆದಿರುವ ಹಿಂಸಾಚಾರ, ಕಾನೂನನ್ನು ಉಲ್ಲಂಘಿಸುವ ಕೃತ್ಯಗಳಿಗೆ ಹೊಣೆಗಾರರಾಗಿರುವ ಯಾರಾದರೂ ಕೂಡ ಅವರೇ ಜವಾಬ್ದಾರರಾಗಿರುತ್ತಾರೆ ಎಂದರು.
ಪ್ರಧಾನಿ ಶೇಖ್ ಹಸೀನಾ ಅಮೆರಿಕದಲ್ಲಿ ಆಶ್ರಯ?:ಸುದ್ದಿಗೋಷ್ಠಿಯಲ್ಲಿ ಮ್ಯಾಥ್ಯೂ ಮಿಲ್ಲರ್ ಅವರಿಗೆ ಮಾಧ್ಯಮದವರು ಮಾಜಿ ಪ್ರಧಾನಿ ಹಸೀನಾ ಅವರು ಅಮೆರಿಕಾದಲ್ಲಿ ಆಶ್ರಯ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದಾಗ, 'ನನಗೆ ತಿಳಿದಿಲ್ಲ' ಎಂದು ಉತ್ತರಿಸಿದ್ದಾರೆ. ಹಾಗೇ, "ಕಳೆದ ಕೆಲವು ವಾರಗಳಿಂದ ನಡೆಯುತ್ತಿರುವ ಹಿಂಸಾಚಾರ ಮತ್ತು ಅನೇಕ ಸಾವು - ನೋವುಗಳಿಗೆ ಸಂಬಂಧಿಸಿದಂತೆ ಪೂರ್ಣ ಮತ್ತು ಪಾರದರ್ಶಕ ತನಿಖೆಗಳನ್ನು ಹೊಂದಿರುವುದು ಅತ್ಯಗತ್ಯ. ಮಧ್ಯಂತರ ಸರ್ಕಾರಕ್ಕೆ ಸಂಬಂಧಿಸಿದಂತೆ ನಾವು ಕೂಡ ಗಮನಹರಿಸುವುದು ಮುಖ್ಯವಾಗಿದೆ ಎಂದು ನಾವು ಭಾವಿಸುತ್ತೇವೆ " ಎಂದು ಮಿಲ್ಲರ್ ಹೇಳಿದ್ದಾರೆ.
"ಅಲ್ಲದೇ ಬಾಂಗ್ಲಾದೇಶದ ಜನರೊಂದಿಗೆ ಅಮೆರಿಕ ತನ್ನ ಸಂಬಂಧವನ್ನು ಬಹಳವಾಗಿ ಗೌರವಿಸುತ್ತದೆ. ಅದೇ ಸಂಬಂಧವನ್ನು ನಾವು ಮುಂದುವರೆಸುವುದನ್ನು ನೋಡಲು ಬಯಸುತ್ತೇವೆ, ಪ್ರತಿಯೊಬ್ಬರನ್ನು ವಿನಂತಿಸುತ್ತೇನೆ. ಸದ್ಯ ಬಾಂಗ್ಲಾದೇಶದ ಪರಿಸ್ಥಿತಿಯನ್ನು ಅಮೆರಿಕ ಆಡಳಿತ ಅತ್ಯಂತ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ನಮ್ಮ ಸರ್ಕಾರ ಬಾಂಗ್ಲಾದೇಶದ ಜನರೊಂದಿಗೆ ನಿಂತಿದೆ. ಈ ಹಿಂಸಾಚಾರದಿಂದ ದೂರವಿರಲು ನಾವು ಎಲ್ಲಾ ಪಕ್ಷಗಳನ್ನು ಒತ್ತಾಯಿಸುತ್ತೇವೆ. ಕಳೆದ ವಾರಗಳಲ್ಲಿ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದ್ದೇವೆ. ಇನ್ನಾದರೂ ಮುಂದಿನ ದಿನಗಳಲ್ಲಿ ನಾವು ಶಾಂತ ಮತ್ತು ಸಂಯಮಕ್ಕಾಗಿ ಕೋರುತ್ತಿದ್ದೇವೆ"ಎಂದು ಅವರು ಹೇಳಿದರು.