ಕರ್ನಾಟಕ

karnataka

ETV Bharat / international

ಪದಚ್ಯುತ ಪ್ರಧಾನಿ ಶೇಖ್​ ಹಸೀನಾರನ್ನು ಹಸ್ತಾಂತರಿಸಲು ಭಾರತಕ್ಕೆ ಬಾಂಗ್ಲಾದೇಶ ಕೋರಿಕೆ - SHEIKH HASINA

ಹಿಂದುಗಳ ಮಾರಣಹೋಮದ ನಡುವೆ ಮಾಜಿ ಪ್ರಧಾನಿ ಶೇಖ್​ ಹಸೀನಾರನ್ನು ಹಸ್ತಾಂತರಿಸುವಂತೆ ಕೋರಿ ಬಾಂಗ್ಲಾದೇಶ ಸರ್ಕಾರ ಭಾರತಕ್ಕೆ ಮನವಿ ಮಾಡಿದೆ.

ಪದಚ್ಯುತ ಪ್ರಧಾನಿ ಶೇಖ್​ ಹಸೀನಾ
ಪದಚ್ಯುತ ಪ್ರಧಾನಿ ಶೇಖ್​ ಹಸೀನಾ (IANS)

By PTI

Published : Dec 23, 2024, 4:56 PM IST

ಢಾಕಾ(ಬಾಂಗ್ಲಾದೇಶ):ನಾಗರಿಕ ದಂಗೆಯಿಂದ ಅಧಿಕಾರ ಕಳೆದುಕೊಂಡು ದೇಶದಿಂದ ಪಲಾಯನ ಮಾಡಿ ಭಾರತದಲ್ಲಿ ಆಶ್ರಯ ಪಡೆದಿರುವ ಪದಚ್ಯುತ ಪ್ರಧಾನಿ ಶೇಖ್​ ಹಸೀನಾ ಅವರನ್ನು ತಮಗೆ ಹಸ್ತಾಂತರಿಸಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ಕೋರಿದೆ.

ಭಾರತದ ರಾಜತಾಂತ್ರಿಕ ಅಧಿಕಾರಿಗಳಿಗೆ ಟಿಪ್ಪಣಿ ಬರೆದಿರುವ ಮೊಹಮದ್​ ಯೂನುಸ್​ ಅವರ ಮಧ್ಯಂತರ ಸರ್ಕಾರ, ಶೇಖ್​ ಹಸೀನಾ ಅವರನ್ನು ದೇಶಕ್ಕೆ ಮರಳಿಸಬೇಕು ಎಂದು ತಿಳಿಸಿದೆ.

ರಾಜತಾಂತ್ರಿಕ ಸಂದೇಶ ರವಾನೆ:ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ಬಾಂಗ್ಲಾ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್, "ಮಾಜಿ ಪ್ರಧಾನಿಗಳ ಮೇಲೆ ಇರುವ ಆರೋಪಗಳನ್ನು ವಿಚಾರಣೆ ನಡೆಸಬೇಕಿದೆ. ಹೀಗಾಗಿ ಅವರನ್ನು ಢಾಕಾಗೆ ಹಿಂತಿರುಗಿಸಬೇಕು ಎಂದು ಭಾರತ ಸರ್ಕಾರಕ್ಕೆ (ರಾಜತಾಂತ್ರಿಕ ಟಿಪ್ಪಣಿ) ಮನವಿ ಮಾಡಲಾಗಿದೆ" ಎಂದರು.

ಇದಕ್ಕೂ ಮುನ್ನ ಅಲ್ಲಿನ ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್ ಆಲಂ, ಪದಚ್ಯುತ ಪ್ರಧಾನಿ ಹಸೀನಾರನ್ನು ಭಾರತದಿಂದ ಹೊರಹಾಕುವಂತೆ ಕ್ರಮ ಕೈಗೊಳ್ಳಲು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದರು.

ಹಸೀನಾರನ್ನು ಕರೆತರುವ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ. ಸದ್ಯ ಆ ಪ್ರಕ್ರಿಯೆ ಜಾರಿಯಲ್ಲಿದೆ. ಢಾಕಾ ಮತ್ತು ನವದೆಹಲಿ ನಡುವೆ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿದೆ. ಇದರ ಅಡಿಯಲ್ಲಿ ಮಾಜಿ ಪ್ರಧಾನಿಯನ್ನು ಬಾಂಗ್ಲಾದೇಶಕ್ಕೆ ಮರಳಿ ಕರೆ ತರಬಹುದು ಎಂದು ಆಲಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಸೀನಾ ಮೇಲೆ ಸಾಲು ಸಾಲು ಕೇಸ್​:ಬಾಂಗ್ಲಾದೇಶದಲ್ಲಿ ದೀರ್ಘಕಾಲ ಆಡಳಿತ ನಡೆಸಿದ ಪದಚ್ಯುತ ಪ್ರಧಾನಿ ಶೇಖ್​ ಹಸೀನಾ, ಸಚಿವರು, ಸಲಹೆಗಾರರು, ಸೇನೆ ಮತ್ತು ಅಧಿಕಾರಿಗಳ ವಿರುದ್ಧ ಮೊಹಮದ್​ ಯೂನುಸ್​ ಅವರ ಮಧ್ಯಂತರ ಸರ್ಕಾರ ನರಮೇಧ ಸೇರಿದಂತೆ ಸಾಲು ಸಾಲು ಆರೋಪಗಳನ್ನು ಹೊರಿಸಿ ಪ್ರಕರಣಗಳನ್ನು ದಾಖಲಿಸಿದೆ. ಜೊತೆಗೆ ಬಂಧನ ವಾರಂಟ್​ ಕೂಡ ಹೊರಡಿಸಿದೆ. ನಾಗರಿಕ ದಂಗೆಯ ಬಳಿಕ ಆಗಸ್ಟ್ 5ರಂದು ಹಸೀನಾ ಅವರು ಢಾಕಾದಿಂದ ಭಾರತಕ್ಕೆ ಪಲಾಯನ ಮಾಡಿದ್ದರು.

ಇದನ್ನೂ ಓದಿ:ಬಾಂಗ್ಲಾದೇಶ: ಅರ್ಚಕನ ಕೈ, ಕಾಲು ಕಟ್ಟಿ ಬರ್ಬರ ಹತ್ಯೆ; ದೇವಸ್ಥಾನದಲ್ಲಿದ್ದ ಬೆಲೆಬಾಳುವ ವಸ್ತುಗಳ ಲೂಟಿ

ABOUT THE AUTHOR

...view details