ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ದಂಗೆಯಿಂದಾಗಿ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರ ಸರ್ಕಾರ ಪತನವಾಗಿದೆ. ನೊಬೆಲ್ ಪುರಸ್ಕೃತ ಮೊಹಮದ್ ಯೂನಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆಯಾಗಿದೆ. ದೇಶ ಆರ್ಥಿಕವಾಗಿ ಜರ್ಜರಿತವಾಗಿದ್ದು, ಈಗ ವಿಶ್ವಬ್ಯಾಂಕ್ನಿಂದ ಹೆಚ್ಚುವರಿ ಸಾಲಕ್ಕೆ ಕೈಯೊಡ್ಡಿದೆ.
ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿರುವ ಯೂನಸ್ ಅವರು ಯೋಜನೆಗಳಿಗೆ ಹಣ ಹೊಂದಿಸಲು ಪರದಾಡುತ್ತಿದ್ದಾರೆ. ದೇಶದ ಅಭಿವೃದ್ಧಿ ಮತ್ತು ಮೂಲಸೌಕರ್ಯ ಒದಗಿಸಲು ವಿಶ್ವಬ್ಯಾಂಕ್ನಿಂದ 1 ಬಿಲಿಯನ್ ಅಮೆರಿಕನ್ ಡಾಲರ್‌ಗಳಷ್ಟು ಆರ್ಥಿಕ ನೆರವು ಕೋರಿದ್ದಾರೆ.
ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲಗಳ ಸಲಹೆಗಾರ ಮುಹಮ್ಮದ್ ಫೌಜುಲ್ ಕಬೀರ್ ಖಾನ್ ಅವರು ಬಾಂಗ್ಲಾದೇಶ ಮತ್ತು ಭೂತಾನ್‌ಗಳ ವಿಶ್ವಬ್ಯಾಂಕ್‌ನ ನಿರ್ದೇಶಕ ಅಬ್ದುಲ್ಲಾಯ್ ಸೆಕ್ ಅವರನ್ನು ಢಾಕಾದಲ್ಲಿ ಈಚೆಗೆ ಭೇಟಿಯಾದರು. ಈ ವೇಳೆ ಅವರು ಆರ್ಥಿಕ ನೆರವಿಗೆ ಮನವಿ ಮಾಡಿದ್ದಾರೆ.
ಈ ಹಿಂದಿನ ಶೇಕ್ ಹಸೀನಾರ ಸರ್ಕಾರವು ವಿದ್ಯುತ್ ಮತ್ತು ಇಂಧನ ಆಮದು ಪೂರೈಕೆದಾರರಿಗೆ 2 ಬಿಲಿಯನ್ ಡಾಲರ್‌ಗಿಂತ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಇದರಿಂದ ಈ ಕ್ಷೇತ್ರಗಳಲ್ಲಿ ಉತ್ಪಾದನೆ ಕುಂಠಿತವಾಗಿದೆ. ದೇಶದ ಇದು ಮುಂದಿನ ದಿನಗಳಲ್ಲಿ ಸಮಸ್ಯೆ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಸಾಲದ ಹಣ ಪಾವತಿಸಲು ವಿದ್ಯುತ್ ವಲಯದಲ್ಲಿ ಬಾಕಿ ಇರುವ 2 ಬಿಲಿಯನ್ ಡಾಲರ್ನಷ್ಟು ಸಾಲದ ಅಗತ್ಯವಿದೆ ಎಂದು ಕೋರಿದ್ದಾರೆ.
ಹಸೀನಾ ಅಧಿಪತ್ಯ ಅಂತ್ಯ:ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರೋಧಿ ಹೋರಾಟ ತೀವ್ರಗೊಂಡು ಬಳಿಕ ಅದು ದಂಗೆಯ ಸ್ವರೂಪ ಪಡೆದುಕೊಂಡಿತು. ಮೊದಲು ವಿದ್ಯಾರ್ಥಿ ಹೋರಾಟವು ತೀವ್ರ ಸ್ವರೂಪ ಪಡೆದು ಹಿಂಸಾತ್ಮಕ ರೂಪ ಪಡೆದುಕೊಂಡಿತು. ಇದರಿಂದ 500ಕ್ಕೂ ಅಧಿಕ ಜನರು ಸಾವಿಗೀಡಾದರು. ಆಗಸ್ಟ್ 5ರಂದು ಪ್ರಧಾನಿ ನಿವಾಸದ ಮೇಲೆ ಪ್ರತಿಭಟನಾಕಾರರು ದಾಳಿ ಮಾಡಿದಾಗ, ಮಾಜಿ ಪ್ರಧಾನಿ ಶೇಕ್ ಹಸೀನಾ ದೇಶ ಬಿಟ್ಟು ಪರಾರಿಯಾಗಿದ್ದರು.
ಈ ಮೂಲಕ 2009 ರಿಂದ ಆಡಳಿತ ನಡೆಸುತ್ತಿದ್ದ ಅವಾಮಿ ಲೀಗ್ ಸರ್ಕಾರದ ಆಡಳಿತವೂ ಕೊನೆಗೊಂಡಿತು. ಬಿಕ್ಕಟ್ಟಿಗೆ ಕಾರಣವಾದ ಹೋರಾಟವು ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು, ಕ್ರಿಶ್ಚಿಯನ್, ಬೌದ್ಧರ ಮೇಲೆ ತಿರುಗಿಕೊಂಡು ಹಿಂಸೆಯ ರೂಪ ಪಡೆಯಿತು. ಬಳಿಕ ಆಗಸ್ಟ್ 8ರಂದು, ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರ ನೇತೃತ್ವದಲ್ಲಿ ಮಧ್ಯಂತರ ಸರ್ಕಾರ ರಚನೆ ಮಾಡಲಾಗಿದೆ.
ಇದನ್ನೂ ಓದಿ:2013ರ ಗೋಲಿಬಾರ್ ಪ್ರಕರಣ: ಶೇಖ್ ಹಸೀನಾ ವಿರುದ್ಧ 'ಸಾಮೂಹಿಕ ಕೊಲೆ' ದೂರು ದಾಖಲು - Sheikh Hasina