ಢಾಕಾ(ಬಾಂಗ್ಲಾದೇಶ):ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ಮತ್ತು ಅದರ ಪರವಾಗಿರುವ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗಾಗಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರ ಕಿಚ್ಚಿಗೆ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ.
ಪ್ರತಿಭಟನಾಕಾರರು 'ಢಾಕಾ ಚಲೋ ಅಭಿಯಾನ' ನಡೆಸುತ್ತಿದ್ದಾರೆ. ಸಾಗರೋಪಾದಿಯಲ್ಲಿ ಪ್ರತಿಭಟನಾಕಾರರು ರಾಜಧಾನಿ ಕಡೆಗೆ ನುಗ್ಗಿ ಬರುತ್ತಿದ್ದಾರೆ. ಪ್ರಧಾನಿ ನಿವಾಸದ ಮುಂದೆ ಈಗಾಗಲೇ ಭಾರೀ ಪ್ರಮಾಣದಲ್ಲಿ ಹೋರಾಟಗಾರರು ಜಮಾಯಿಸಿದ್ದಾರೆ. ಪ್ರಧಾನಿ ನಿವಾಸಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವ ಕಾರಣ, ಶೇಖ್ ಹಸೀನಾ ಅಲ್ಲಿಂದ ಪಲಾಯನ ಮಾಡಿ ಗೌಪ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಢಾಕಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿವೆ. ಶಾಂತಿ ಸಂಧಾನಕ್ಕೆ ನಡೆಯುತ್ತಿರುವ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ದೇಶಾದ್ಯಂತ ನಡೆಯುತ್ತಿರುವ ಹೋರಾಟಕ್ಕೆ ಇತಿಶ್ರೀ ಹಾಡಬೇಕಾದರೆ, ಪ್ರಧಾನಮಂತ್ರಿ ರಾಜೀನಾಮೆ ಅನಿವಾರ್ಯವಾಗಿದೆ. ಇದನ್ನು ಮನಗಂಡಿರುವ ಶೇಖ್ ಹಸೀನಾ ಅವರು ತಮ್ಮ ಸ್ಥಾನ ತೊರೆಯಲು ಮುಂದಾಗಿದ್ದಾರೆ.
ಪ್ರಧಾನಿಗಳ ಹಿರಿಯ ಸಲಹೆಗಾರರು ಈ ಬಗ್ಗೆ ಸುಳಿವು ನೀಡಿದ್ದಾರೆ. ಪ್ರಧಾನಮಂತ್ರಿ ರಾಜೀನಾಮೆ ನೀಡಲಿದ್ದಾರೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರು 'ಸಾಧ್ಯತೆ' ಇದೆ ಉತ್ತರಿಸಿದ್ದಾರೆ. ಅಧಿಕೃತವಾಗಿ ಅವರು ಹೇಳಿಕೆ ನೀಡಲು ಹಿಂಜರಿದಿದ್ದಾರೆ.