ದಾವಣಗೆರೆ: ದಾವಣಗೆರೆ ಬೆಣ್ಣೆ ದೋಸೆ ರಾಜ್ಯ - ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿಯಾಗಿರುವುದು ಗೊತ್ತೇ ಇದೆ. ದೋಸೆ ಸವಿಯಲು ದೂರದ ಊರುಗಳಿಂದ ನಗರಕ್ಕೆ ಆಗಮಿಸುವ ಪ್ರವಾಸಿಗರು, ಗರಿಗರಿಯಾದ ಬಾಯಲ್ಲಿಟ್ಟರೆ ಕರಗುವ ಬೆಣ್ಣೆ ದೋಸೆ ಸವಿದು ಖುಷಿ ಪಡುತ್ತಾರೆ. ಈಗ ದಾವಣಗೆರೆ ಬೆಣ್ಣೆ ದೋಸೆಯಂತೆ, ನಗರದ ಕೀರ್ತಿಯನ್ನು ಹೆಚ್ಚಿಸಲು ಬಂದಿದೆ ಮತ್ತೊಂದು ಖಾದ್ಯ, ಅದುವೆ ಒಬ್ಬಟ್ಟು. ಬೇಳೆ ಹೂರಣದ ಒಬ್ಬಟ್ಟು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿ ಗಳಿಸಿದೆ.
ಹೌದು ದಾವಣಗೆರೆಯಲ್ಲಿ ಸಿದ್ಧವಾಗುವ ಹೋಳಿಗೆಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಅಷ್ಟೇ ಅಲ್ಲ ತನ್ನದೇ ಆದ ಸವಿರುಚಿಯಿಂದ ಇದು ಭಾರಿ ಖ್ಯಾತಿ ಗಳಿಸಿದೆ. ವಿದೇಶದಲ್ಲಿ ಏನೇ ಶುಭಕಾರ್ಯ ನಡೆದರೂ ಅಲ್ಲಿ ದಾವಣಗೆರೆಯ ಕಾಯಿ ಹೋಳಿಗೆ, ಬೇಳೆ ಹೋಳಿಗೆ ಇದ್ದೇ ಇರುತ್ತದೆ ಮತ್ತು ಇರಲೇಬೇಕು.
ಅಮೆರಿಕದಲ್ಲೂ ಶ್ರೀ ದುರ್ಗಾ ಹೋಳಿಗೆ ಸೆಂಟರ್ ಘಮಲು: ದಾವಣಗೆರೆ ನಗರದ ದೊಡ್ಡಪೇಟೆಯ ವಿರಕ್ತಮಠದ ಕೂಗಳತೆ ದೂರದಲ್ಲೇ ಪುಟ್ಟ ಗೂಡಿನಲ್ಲಿ ಹೋಳಿಗೆ ಸಿದ್ಧಪಡಿಸಲಾಗುತ್ತದೆ. ವೆಂಕಟೇಶ್ ಹಾಗೂ ಮಮತಾ ದಂಪತಿ ’ಶ್ರೀ ದುರ್ಗಾ ಹೋಳಿಗೆ ಸೆಂಟರ್’ ಆರಂಭಿಸಿ ಕಳೆದ 16 ವರ್ಷಗಳಿಂದ ಹೋಳಿಗೆ ತಯಾರಿಸುತ್ತಿದ್ದಾರೆ.
![devanagere-special-holige-making-and-create-demand-internationally](https://etvbharatimages.akamaized.net/etvbharat/prod-images/15-01-2025/kn-dvg-01-15-international-holige-spl-pkg-7204336_15012025112646_1501f_1736920606_416.jpg)
ಇವರು ತಯಾರಿಸುವ ಹೋಳಿಗೆಗೆ ಈಗ ವಿದೇಶದಲ್ಲೂ ಭಾರಿ ಬೇಡಿಕೆ ಬಂದಿದೆ. ವಿದೇಶದಲ್ಲಿ ಜೀವನ ಸಾಗಿಸುತ್ತಿರುವವರ ಅಚ್ಚುಮೆಚ್ಚಿನ ಸಿಹಿ ತಿಂಡಿಯಾಗಿ ಹೋಳಿಗೆ ಹೆಸರು ಮಾಡಿದೆ. ದಾವಣಗೆರೆಯಿಂದ ವಿದೇಶಗಳಿಗೆ ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಸವಿ ರುಚಿಯ ಕಾಯಿ ಹಾಗೂ ಬೇಳೆ ಹೋಳಿಗೆ ಕಳಿಸಿಕೊಡಲಾಗುತ್ತದೆ.
![ದಾವಣಗೆರೆ ನಗರದ ದೊಡ್ಡಪೇಟೆಯ ವಿರಕ್ತಮಠದ ಕೂಗಳತೆ ದೂರದಲ್ಲೇ ಪುಟ್ಟ ಗೂಡಿನಲ್ಲಿ ಹೋಳಿಗೆ ಸಿದ್ಧಪಡಿಸಲಾಗುತ್ತದೆ](https://etvbharatimages.akamaized.net/etvbharat/prod-images/15-01-2025/kn-dvg-01-15-international-holige-spl-pkg-7204336_15012025112646_1501f_1736920606_85.jpg)
ಹೆಚ್ಚಾಗಿ ಕಾಯಿ ಹೋಳಿಗೆಗೆ ಭಾರಿ ಡಿಮ್ಯಾಂಡ್ ಇದ್ದು, ಗ್ರಾಹಕರ ಕೋರಿಕೆಯಂತೆ ಕೋರಿಯರ್ ಮೂಲಕ ಇಲ್ಲಿಂದ ರವಾನೆ ಮಾಡಲಾಗುತ್ತದೆ. ಕಾಯಿ ಹೋಳಿಗೆಯನ್ನು ಒಂದು ವಾರಗಳ ಕಾಲ ಇಟ್ಟು ತಿನ್ನುವುದ್ದರಿಂದ ಅದಕ್ಕೆ ತುಸು ಹೆಚ್ಚು ಬೇಡಿಕೆ ಇದೆ. ಹಾಗಾಗಿ ಇದನ್ನು ಇಲ್ಲಿಂದ ವಿದೇಶಗಳಿಗೆ ರವಾನೆ ಮಾಡಲಾಗುತ್ತಿದೆ.
![devanagere-special-holige-making-and-create-demand-internationally](https://etvbharatimages.akamaized.net/etvbharat/prod-images/15-01-2025/kn-dvg-01-15-international-holige-spl-pkg-7204336_15012025112646_1501f_1736920606_105.jpg)
ಇನ್ನು ಬೇಳೆ ಹೋಳಿಗೆಯನ್ನೂ ಕೂಡಾ 3-4 ದಿನಗಳ ಕಾಲ ಇಡಬಹುದಾಗಿದ್ದು, ಕೋರಿಯರ್ ಬದಲಿಗೆ ವಿದೇಶಕ್ಕೆ ತೆರಳುವರು ತಮ್ಮೊಂದಿಗೆ ಇವುಗಳನ್ನು ಕೊಂಡೊಯ್ಯುತ್ತಾರೆ. ಬೇಡಿಕೆ ಬಂದರೆ ಒಮ್ಮೆಲೆ 50-100 ಹೋಳಿಗೆಗಳನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ ಅಂತಾರೆ ಹೋಳಿಗೆ ಸೆಂಟರ್ ಮಾಲೀಕ ವೆಂಕಟೇಶ್.
![devanagere-special-holige-making-and-create-demand-internationally](https://etvbharatimages.akamaized.net/etvbharat/prod-images/15-01-2025/kn-dvg-01-15-international-holige-spl-pkg-7204336_15012025112646_1501f_1736920606_217.jpg)
ಇಲ್ಲಿನ ಹೋಳಿಗೆಗೆ ಇದೆ ದುಬೈ, ಅಮೆರಿಕ, ಸಿಂಗಾಪುರದಲ್ಲೂ ಬೇಡಿಕೆ: ವೆಂಕಟೇಶ್ ಹಾಗೂ ಮಮತಾ ದಂಪತಿ ತಯಾರಿಸುವ ಕಾಯಿ ಹೋಳಿಗೆ, ಬೇಳೆ ಹೋಳಿಗೆಗೆ ದೂರದ ದುಬೈ, ಯುಎಸ್ಎ, ಸಿಂಗಾಪುರಗಳಲ್ಲಿ ಭಾರಿ ಬೇಡಿಕೆ ಇದೆ. ಸತತವಾಗಿ 16 ವರ್ಷಗಳಿಂದ ಇವರು ವರ್ಷಕ್ಕೆ ನಾಲ್ಕೈದು ಬಾರಿ ಹೋಳಿಗೆ ಸಿದ್ದಪಡಿಸಿ ಸಂಬಂಧಪಟ್ಟವರಿಗೆ ಕಳುಹಿಸಿ ಕೊಡುತ್ತಾರೆ. ಹೆಚ್ಚಾಗಿ ಇವರು ಕಾಯಿ ಹೋಳಿಗೆಗಳನ್ನು ಕೋರಿಯರ್ ಮೂಲಕ ವಿದೇಶಕ್ಕೆ ರವಾನೆ ಮಾಡುತ್ತಾರೆ. ವಿದೇಶಗಳಲ್ಲಿ ನಡೆಯುವ ಹಿಂದೂ ಧರ್ಮದ ಶುಭ ಕಾರ್ಯಗಳಿಗೆ ಈ ಹೋಳಿಗೆಯನ್ನು ಉಪಯೋಗ ಮಾಡಿಕೊಳ್ಳಲಾಗುತ್ತದೆ.
![devanagere-special-holige-making-and-create-demand-internationally](https://etvbharatimages.akamaized.net/etvbharat/prod-images/15-01-2025/kn-dvg-01-15-international-holige-spl-pkg-7204336_15012025112646_1501f_1736920606_619.jpg)
ವಿದೇಶಕ್ಕೆ ಹೋಳಿಗೆ ಕಳುಹಿಸುವ ಬಗ್ಗೆ ವೆಂಕಟೇಶ್ ದಂಪತಿ ಹೇಳುವುದಿಷ್ಟು: ಹೋಳಿಗೆ ತಯಾರಿಕೆ ಬಗ್ಗೆ ವೆಂಕಟೇಶ್ ಮಾತನಾಡಿದ್ದಾರೆ. "16 ವರ್ಷಗಳಿಂದ ಹೋಳಿಗೆ ಮಾಡ್ತಿದ್ದೇವೆ. ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಬಿಳಿ ಹೋಳಿಗೆ ಮಾಡ್ತಿದ್ದೇವೆ. ದಿನಕ್ಕೆ 250 - 300 ಹೋಳಿಗೆ ಮಾಡುತ್ತೆವೆ. ಹಬ್ಬ ಹರಿದಿನಗಳಲ್ಲಿ 800 ಹೋಳಿಗೆ ಮಾಡ್ತೇವೆ. ದುಬೈ, ಅಮೆರಿಕ, ಸಿಂಗಾಪುರ್ ದೇಶಗಳಿಗೆ ಕಾಯಿ ಹೋಳಿಗೆಯನ್ನು ಕಳುಹಿಸಿ ಕೊಡುತ್ತೇವೆ. ಕೋರಿಯರ್ ಮೂಲಕ ಕಳಿಸಿದ್ರೇ ಆರು ದಿನ ಬೇಕಾಗುತ್ತದೆ. ಅದಕ್ಕೆ ಕಾಯಿ ಹೋಳಿಗೆ ಕಳಿಸುತ್ತೇವೆ. ಪಾರ್ಟಿನೇ ತೆಗೆದುಕೊಂಡು ವಿದೇಶಕ್ಕೆ ಹೋದರೆ ಬೇಳೆ ಹೋಳಿಗೆ ತೆಗೆದುಕೊಂಡು ಹೋಗ್ತಾರೆ. ಒಮ್ಮೆಗೆ 50 - 60 ಹೋಳಿಗೆ ಕಳಿಸುತ್ತೇವೆ, ವರ್ಷದಲ್ಲಿ ನಾಲ್ಕೈದು ಬಾರಿ ದಾವಣಗೆರೆ ಹೋಳಿಗೆ ರವಾನೆ ಮಾಡ್ತೇವೆ" ಎಂದು ಅವರು ಹೇಳಿದ್ದಾರೆ.
![devanagere-special-holige-making-and-create-demand-internationally](https://etvbharatimages.akamaized.net/etvbharat/prod-images/15-01-2025/kn-dvg-01-15-international-holige-spl-pkg-7204336_15012025112646_1501f_1736920606_1056.jpg)
ಇದನ್ನು ಓದಿ:ದಕ್ಷಿಣ ಭಾರತದ ಕುಂಭಮೇಳ 'ಗವಿಮಠ ರಥೋತ್ಸವ'ಕ್ಕೆ ಕ್ಷಣಗಣನೆ
5 ಮಂಗಳವಾರ ಊರಿಗೆ ಊರೇ ಖಾಲಿ: ಹಾವೇರಿಯ ಈ ಗ್ರಾಮಕ್ಕೆ ಅಂದು ಪ್ರವೇಶವೂ ನಿರ್ಬಂಧ!