ಜೆರುಸಲೇಂ: ಹಿಜ್ಬುಲ್ಲಾ ವಿರುದ್ಧ ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ಮುಂದುವರಿಯಬೇಕೆಂಬುದರ ಬಗ್ಗೆ ಇಸ್ರೇಲ್ ಸೇನಾಪಡೆ ಎಚ್ಚರಿಕೆಯಿಂದ ಯೋಜನೆಗಳನ್ನು ರೂಪಿಸುತ್ತಿದ್ದು, ಅದರ ವಿರುದ್ಧ ದಾಳಿಗಳು ಇನ್ನೂ ತೀವ್ರವಾಗಲಿವೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರ್ಜಿ ಹಲೇವಿ ಹೇಳಿದ್ದಾರೆ.
"ಕಳೆದ ವರ್ಷ ಗಾಜಾ ಸಂಘರ್ಷ ಪ್ರಾರಂಭವಾದಾಗಿನಿಂದ ಇಸ್ರೇಲ್ ಪಡೆಗಳು ಡಜನ್ಗಟ್ಟಲೆ ಹಿಜ್ಬುಲ್ಲಾದ ಉನ್ನತ ಮಿಲಿಟರಿ ನಾಯಕರು ಸೇರಿದಂತೆ 600ಕ್ಕೂ ಹೆಚ್ಚು ಉಗ್ರರನ್ನು ಕೊಂದಿವೆ. ಇತ್ತೀಚೆಗೆ ಲೆಬನಾನ್‌ನಲ್ಲಿನ ನೂರಾರು ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ನಡೆಸಲಾಗಿದ್ದು, ಇದು ಹಿಜ್ಬುಲ್ಲಾದ ರಾಕೆಟ್ ಉಡಾವಣೆ ಮತ್ತು ಯುದ್ಧ ಸಾಮರ್ಥ್ಯಗಳನ್ನು ದುರ್ಬಲಗೊಳಿಸಿದೆ" ಎಂದು ಹಲೇವಿ ಭಾನುವಾರ ಇಸ್ರೇಲ್ ವಾಯುಪಡೆಯ ಪ್ರಮುಖ ವಾಯುನೆಲೆ ಟೆಲ್ ನೋಫ್ ನೆಲೆಯಿಂದ ದೂರದರ್ಶನ ಭಾಷಣದಲ್ಲಿ ಹೇಳಿದರು.
"ನಮ್ಮ ದಾಳಿಗಳು ಮತ್ತಷ್ಟು ತೀವ್ರಗೊಳ್ಳಲಿವೆ ಮತ್ತು ಹಿಜ್ಬುಲ್ಲಾ ಇನ್ನೂ ದೊಡ್ಡ ಪ್ರಮಾಣದ ಬೆಲೆ ತೆರಬೇಕಾಗಲಿದೆ. ನಾವು ನಮ್ಮಲ್ಲಿರುವ ಮತ್ತಷ್ಟು ಬಲವನ್ನು ಬಳಸಬೇಕಿದೆ. ಆಕ್ರಮಣಕ್ಕಾಗಿ ಮತ್ತು ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ನಾವು ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿರುತ್ತೇವೆ" ಎಂದು ಹಲೇವಿ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಲೆಬನಾನ್ನ ಒಳಗೆ ನೆಲದ ಕಾರ್ಯಾಚರಣೆ ನಡೆಸುವ ಬಗ್ಗೆ ಮಾತನಾಡಿದ ಇಸ್ರೇಲ್ ಮಿಲಿಟರಿ ವಕ್ತಾರ, "ಉತ್ತರ ಇಸ್ರೇಲ್ನಿಂದ ಸ್ಥಳಾಂತರಗೊಂಡ ನಿವಾಸಿಗಳು ಮರಳಿ ತಮ್ಮ ಮನೆಗಳಿಗೆ ಹಿಂತಿರುವಂತಾಗಲು ಅಗತ್ಯವಿರುವ ಎಲ್ಲವನ್ನೂ ನಾವು ಮಾಡುತ್ತೇವೆ" ಎಂದು ಹೇಳಿದರು ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.