ಅಕ್ಟೌ (ಕಝಾಕಿಸ್ತಾನ): ಕ್ರಿಸ್ಮಸ್ ದಿನದಂದೇ ಕಝಾಕಿಸ್ತಾನದ ಅಕ್ಟೌ ಬಳಿ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಪತನದಲ್ಲಿ 38 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಬ್ಬರು ಮಕ್ಕಳು ಸೇರಿ 29 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದಾರೆ. ದುರಂತಕ್ಕೆ ನಿಖರ ಕಾರಣ ತಿಳಿದಿಲ್ಲವಾದರೂ, ರಷ್ಯಾ- ಉಕ್ರೇನ್ ನಡುವಿನ ಸಂಘರ್ಷದತ್ತ ಅನುಮಾನದ ಕೊಂಡಿ ತಿರುಗಿದೆ.
ಅಜರ್ಬೈಜಾನ್ನ ರಾಜಧಾನಿ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ತೆರಳುತ್ತಿದ್ದ ವಿಮಾನ ಕಝಾಕಿಸ್ತಾನದ ಮೇಲೆ ಹಾರುತ್ತಿದ್ದಾಗ ಸಮಸ್ಯೆಗೀಡಾಗಿದೆ. ಪಕ್ಷಿಗಳ ಡಿಕ್ಕಿಯಿಂದಾಗಿ ವಿಮಾನ ನಿಯಂತ್ರಣ ಕಳೆದುಕೊಂಡಿದೆ. ತುರ್ತು ಭೂಸ್ಪರ್ಶ ಮಾಡಬೇಕಿದೆ ಎಂದು ಪೈಲಟ್ ಸಂದೇಶ ರವಾನಿಸಿದ್ದ ಎಂಬ ಮಾಹಿತಿ ಹರಿದಾಡುತ್ತಿದೆಯಾದರೂ, ಇದು ಇನ್ನೂ ದೃಢಪಟ್ಟಿಲ್ಲ.
Very interesting: Shrapnel marks on the fuselage of Azerbaijan Airlines plane that crashed in Kazakhstan today. pic.twitter.com/3X5PTIR66E
— Clash Report (@clashreport) December 25, 2024
ಈ ಮಧ್ಯೆ, ಉಕ್ರೇನ್ ಡ್ರೋನ್ಗಳನ್ನು ಹೊಡೆದುರುಳಿಸಲು ರಷ್ಯಾ ಹಾರಿಸಿದ ಕ್ಷಿಪಣಿ ನಿರೋಧಕ ಸಾಧನವು 'ಆಕಸ್ಮಿಕ ಡಿಕ್ಕಿ'ಯಾಗಿ ವಿಮಾನ ಪತನಕ್ಕೀಡಾಗಿದೆ ಎಂದು ಶಂಕಿಸಿ ಅಂತಾರಾಷ್ಟ್ರಿಯ ಮಾಧ್ಯಮಗಳು ವರದಿ ಮಾಡಿವೆ.
ಅನುಮಾನಕ್ಕೆ ಕಾರಣವೇನು? ಪತನವಾದ ವಿಮಾನದ ದೇಹದ ಮೇಲಿನ ರಂಧ್ರಗಳು, ರೆಕ್ಕೆಗಳಿಗೆ ಆದ ಹಾನಿಯು ಕ್ಷಿಪಣಿಯ ಚೂರುಗಳಿಂದಾಗಿದೆ ಎಂದು ವಾಯುಯಾನ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಕ್ಷಿಗಳ ಡಿಕ್ಕಿಯಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ರಂಧ್ರಗಳು ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದ್ದನ್ನು ವಿದೇಶಿ ಸುದ್ದಿಸಂಸ್ಥೆಗಳಾದ ವಾಲ್ಸ್ಟ್ರೀಟ್, ಯುರೋನ್ಯೂಸ್, ಎಎಫ್ಪಿ ವರದಿ ಮಾಡಿವೆ.
This video shows what happened in the minutes before the plane crash in Kazakhstan. The plane repeatedly went up and down before crashing. pic.twitter.com/dQ0H1c9R0R
— BNO News Live (@BNODesk) December 25, 2024
ಉಕ್ರೇನ್ ಹಾರಿಬಿಟ್ಟ ಡ್ರೋನ್ಗಳ ಪ್ರದೇಶದಲ್ಲಿ ಅಜರ್‌ಬೈಜಾನ್ ವಿಮಾನವು ಸಂಚಾರ ನಡೆಸಿತ್ತು. ರಷ್ಯಾ ಪಡೆಗಳು ಇದನ್ನು ಡ್ರೋನ್ ಎಂದುಕೊಂಡು ಕ್ಷಿಪಣಿ ನಿರೋಧಕಗಳ ದಾಳಿ ನಡೆಸಿತ್ತಾ? ಎಂದು ಶಂಕಿಸಲಾಗಿದೆ.
ವರದಿ ಅಲ್ಲಗಳೆದ ರಷ್ಯಾ: ಮಾಧ್ಯಮಗಳಲ್ಲಿ ಭಿತ್ತರವಾದ ವದಂತಿ ವರದಿಗಳನ್ನು ರಷ್ಯಾ ಅಲ್ಲಗಳೆದಿದೆ. ವಿಮಾನ ಅಪಘಾತಕ್ಕೂ ರಷ್ಯಾ- ಉಕ್ರೇನ್ ಯುದ್ಧಕ್ಕೂ ಸಂಬಂಧವಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಂತಿಮ ವರದಿಯಲ್ಲಿ ಸತ್ಯ ಬಯಲಾಗಲಿದೆ ಎಂದು ರಷ್ಯಾದ ಕ್ರೆಮ್ಲಿನ್ ಪ್ರಾಂತ್ಯದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರು ತಿಳಿಸಿದ್ದಾರೆ.
ವಿಮಾನದ ಕಪ್ಪುಪೆಟ್ಟಿಗೆ ಪತ್ತೆ: ದುರಂತಕ್ಕೀಡಾದ ವಿಮಾನದ ಕಪ್ಪುಪೆಟ್ಟಿಗೆಯು (ಬ್ಲ್ಯಾಕ್ಬಾಕ್ಸ್) ಪತ್ತೆಯಾಗಿದೆ. ಅದನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಮಾನದ ಡೇಟಾ ಮತ್ತು ಧ್ವನಿ ರೆಕಾರ್ಡ್ಗಳನ್ನು ಪರಿಶೀಲಿಸಲಾಗುತ್ತಿದೆ.
ಇದನ್ನೂ ಓದಿ: ಕಝಾಕಿಸ್ತಾನದಲ್ಲಿ ಅಜರ್‌ಬೈಜಾನ್ ವಿಮಾನ ಪತನ; ಪವಾಡದಂತೆ 25 ಮಂದಿ ಪಾರು, 40ಕ್ಕೂ ಹೆಚ್ಚು ಸಾವು ಶಂಕೆ- ಭಯಾನಕ ವಿಡಿಯೋ