ಇಸ್ಲಾಮಾಬಾದ್: ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ 71 ಮಂದಿ ಸಾವನ್ನಪ್ಪಿದ್ದು, 67 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ವಾಯುವ್ಯ ಖೈಬರ್ ಪಖ್ತುನಖ್ವಾ ಪ್ರಾಂತ್ಯದಲ್ಲಿ ಮಳೆಯಿಂದ ಅತಿ ಹೆಚ್ಚು ಹಾನಿಯಾಗಿದ್ದು, ಛಾವಣಿ ಕುಸಿತ ಮತ್ತು ಸಿಡಿಲಿನ ಘಟನೆಗಳು ಸೇರಿದಂತೆ ವಿವಿಧ ಘಟನೆಗಳಲ್ಲಿ 32 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್ಡಿಎಂಎ) ಅಧಿಕಾರಿಯೊಬ್ಬರು ಹೇಳಿದರು.
ಖೈಬರ್ ಪಖ್ತುನಖ್ವಾದಲ್ಲಿ ಮೃತಪಟ್ಟವರಲ್ಲಿ 15 ಮಕ್ಕಳು ಮತ್ತು ಐವರು ಮಹಿಳೆಯರು ಸೇರಿದ್ದಾರೆ. ಈ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ 41 ಜನರು ಗಾಯಗೊಂಡಿದ್ದಾರೆ ಮತ್ತು ಈ ಪ್ರದೇಶದಲ್ಲಿ 1,370 ಮನೆಗಳಿಗೆ ಹಾನಿಯಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ 23 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಏಳು ಜನ ಗಾಯಗೊಂಡಿದ್ದಾರೆ, ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ ಮತ್ತು ಎಂಟು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.
ಏಪ್ರಿಲ್ 17 ರಿಂದ ಏಪ್ರಿಲ್ 29 ರವರೆಗೆ ತೀವ್ರ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಎನ್ಡಿಎಂಎ ಬುಧವಾರ ಮುನ್ಸೂಚನೆ ನೀಡಿದೆ. ಪಾಕಿಸ್ತಾನದಲ್ಲಿ ಮಧ್ಯಮದಿಂದ ತೀವ್ರವಾದ ಹವಾಮಾನ ವ್ಯವಸ್ಥೆ ಉಂಟಾಗಬಹುದು. ಭಾರಿ ಮಳೆ, ಗುಡುಗು ಮತ್ತು ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ. ಇದು ದೇಶಾದ್ಯಂತ ವಿವಿಧ ಭಾಗಗಳಲ್ಲಿ ಗಮನಾರ್ಹ ಹಾನಿಯನ್ನುಂಟು ಮಾಡಬಹುದು ಎಂದು ಎನ್ಡಿಎಂಎ ತಿಳಿಸಿದೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳು ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗಬಹುದು ಎನ್ಡಿಎಂಎ ಎಚ್ಚರಿಕೆ ನೀಡಿದೆ.
ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಕಾಶ್ಮೀರದ ಎತ್ತರದ ಪರ್ವತ ಪ್ರದೇಶಗಳಲ್ಲಿ ಕೂಡ ಮಳೆ, ಗುಡುಗು ಮತ್ತು ಹಿಮಪಾತ ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಉಂಟಾಗುತ್ತಿವೆ. ಹಾಗೆಯೇ ಪಂಜಾಬ್ ಮತ್ತು ಸಿಂದ್ನ ಪ್ರದೇಶಗಳಲ್ಲಿ ಸಂಭಾವ್ಯ ಮಳೆ, ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಾಗಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ರೈತರು ತಮ್ಮ ಬೆಳೆಗಳನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಕೆಟ್ಟ ಹವಾಮಾನ ಪರಿಸ್ಥಿತಿಗಳ ಮಧ್ಯೆ ಅನಗತ್ಯವಾಗಿ ಪ್ರಯಾಣ ಕೈಗೊಳ್ಳದಂತೆ ರಾಷ್ಟ್ರೀಯ ಹೆದ್ದಾರಿ ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : ಗಾಜಾ ಯುದ್ಧದಲ್ಲಿ 10 ಸಾವಿರ ಮಹಿಳೆಯರ ಸಾವು: 19 ಸಾವಿರ ಮಕ್ಕಳು ಅನಾಥ - Women Killed In Gaza