ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಬಂಡುಕೋರರು ಪಾಕಿಸ್ತಾನ ಪರಮಾಣು ಶಕ್ತಿ ಆಯೋಗದ (ಪಿಎಇಸಿ) 16 ಉದ್ಯೋಗಿಗಳನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಅಪಹರಣದ ಮಾಹಿತಿ ತಿಳಿಯುತ್ತಿದ್ದಂತೆಯೇ ಶೋಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಎಂಟು ಒತ್ತೆಯಾಳುಗಳನ್ನು ಯಶಸ್ವಿಯಾಗಿ ರಕ್ಷಿಸಿದ್ದಾರೆ. ನಿರಂತರ ಉಗ್ರಗಾಮಿ ಚಟುವಟಿಕೆಗಳಿಂದ ಬಾಧಿತವಾಗಿರುವ ಲಕ್ಕಿ ಮಾರ್ವತ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಖಬುಲ್ ಖೇಲ್ ಅಣುಶಕ್ತಿ ಗಣಿಗಾರಿಕೆ ಯೋಜನಾ ಸ್ಥಳದ ಕಡೆಗೆ ಪ್ರಯಾಣಿಸುತ್ತಿದ್ದ ಉದ್ಯೋಗಿಗಳನ್ನು ಭಾರಿ ಶಸ್ತ್ರಸಜ್ಜಿತ ಉಗ್ರರು ರಸ್ತೆ ಮಧ್ಯದಲ್ಲಿ ತಡೆದು ದಾಳಿ ನಡೆಸಿದ್ದಾರೆ. ನಂತರ ಅವರೆಲ್ಲರನ್ನು ಅಪಹರಿಸಿ ಅವರು ಪ್ರಯಾಣಿಸುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಎಂಟು ಜನರನ್ನು ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ವೇಳೆ ಮೂವರು ಗಾಯಗೊಂಡಿದ್ದು, ಅದರಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ. ಇನ್ನುಳಿದ ಒತ್ತೆಯಾಳುಗಳನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರೆದಿದೆ.
ಅಪಹರಣದ ಜವಾಬ್ದಾರಿ ಹೊತ್ತುಕೊಂಡಿರುವ ಟಿಟಿಪಿ, ಅಪಹರಣಕ್ಕೊಳಗಾದ ಉದ್ಯೋಗಿಗಳನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಪಾಕಿಸ್ತಾನದ ಜೈಲುಗಳಲ್ಲಿರುವ ಟಿಟಿಪಿ ಕೈದಿಗಳನ್ನು ಬಿಡುಗಡೆ ಮಾಡುವುದು ಸೇರಿದಂತೆ ಸಂಘಟನೆಯ ಇತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮನ್ನು ಬಿಡುಗಡೆ ಮಾಡಿಸಿಕೊಳ್ಳಬೇಕೆಂದು ಒತ್ತೆಯಾಳುಗಳು ವೀಡಿಯೊದಲ್ಲಿ ಮನವಿ ಮಾಡಿರುವುದು ಕಾಣಿಸುತ್ತದೆ. ವೀಡಿಯೊ ಅಥವಾ ಉಗ್ರಗಾಮಿಗಳ ಹೇಳಿಕೆಗಳ ಸಾಚಾತನದ ಬಗ್ಗೆ ಇನ್ನಷ್ಟೇ ಪರಿಶೀಲನೆ ನಡೆಯಬೇಕಿದೆ.
ಅಪಹರಣಕ್ಕೊಳಗಾದ ಉದ್ಯೋಗಿಗಳು ಇಂಧನ, ಕೃಷಿ ಮತ್ತು ಔಷಧದಂತಹ ಕ್ಷೇತ್ರಗಳಲ್ಲಿ ಶಾಂತಿಯುತ ಪರಮಾಣು ಬಳಕೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದ ಪಿಎಇಸಿ ಅಡಿಯಲ್ಲಿನ ಗಣಿಗಾರಿಕೆ ಯೋಜನೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳಿಗೆ ಈ ಪ್ರದೇಶದಲ್ಲಿ ಆಗಾಗ ಭದ್ರತಾ ಅಪಾಯ ಎದುರಾಗುತ್ತಿರುವುದನ್ನು ಈ ಘಟನೆಯು ಎತ್ತಿ ತೋರಿಸಿದೆ.
ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದಲ್ಲಿ ಉಗ್ರಗಾಮಿ ಚಟುವಟಿಕೆಗಳು ವ್ಯಾಪಕವಾಗುತ್ತಿವೆ. ಈ ಅಪಹರಣ ಘಟನೆಯ ಒಂದು ದಿನ ಮೊದಲು, ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಯ ಪ್ರತ್ಯೇಕತಾವಾದಿ ಉಗ್ರಗಾಮಿಗಳು ಬಲೂಚಿಸ್ತಾನದಲ್ಲಿ ಸರ್ಕಾರಿ ಕಚೇರಿಗಳು ಮತ್ತು ದುರ್ಗಮ ಪ್ರದೇಶದ ಜಿಲ್ಲೆಗಳಲ್ಲಿನ ಬ್ಯಾಂಕ್ ಮೇಲೆ ದಾಳಿ ಮಾಡಿದ್ದರು.
ಈ ಘಟನೆಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲವಾದರೂ, ಈ ದಾಳಿಯು ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. ಟಿಟಿಪಿ ಮತ್ತು ಬಲೂಚ್ ದಂಗೆಕೋರರು ಅಫ್ಘಾನಿಸ್ತಾನದ ಬೆಟ್ಟಗುಡ್ಡಗಳಲ್ಲಿ ಅವಿತುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನ ಅಧಿಕಾರಿಗಳು ಆರೋಪಿಸಿದ್ದಾರೆ.
ಇದನ್ನೂ ಓದಿ : 'ಪೋಲಿಯೊ ಪ್ರಮಾಣಪತ್ರವಿಲ್ಲದಿದ್ದರೆ ಬರಬೇಡಿ': ಪಾಕಿಸ್ತಾನಿ ಪ್ರಯಾಣಿಕರಿಗೆ ಸೌದಿ ಅರೇಬಿಯಾ ಸೂಚನೆ - POLIO CERTIFICATE