ಲಾಸ್ ಏಂಜಲೀಸ್(ಅಮೆರಿಕ): ಲಾಸ್ ಏಂಜಲೀಸ್ನಲ್ಲಿ ಕಾಣಿಸಿಕೊಂಡಿರುವ ಭೀಕರ ಕಾಡ್ಗಿಚ್ಚು ಹಾಲಿವುಡ್ ಬೆಟ್ಟಗಳಲ್ಲಿ ವೇಗವಾಗಿ ಹರಡುತ್ತಿದ್ದು, ಇಲ್ಲಿನ ಪ್ರಸಿದ್ಧ ಸ್ಥಳಗಳು, ಸೆಲೆಬ್ರಿಟಿಗಳ ಮನೆ ಮತ್ತಿತರ ಆಸ್ತಿಗಳೂ ಕೂಡ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿವೆ. ಬೆಂಕಿ ವ್ಯಾಪಿಸುತ್ತಿರುವುದನ್ನು ನಿಯಂತ್ರಿಲು ಅಗ್ನಿಶಾಮಕದಳ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಇದುವರೆಗೆ ಐವರು ಸಾವನ್ನಪ್ಪಿದ್ದು, 1,30,000 ಜನರು ತಾವಿದ್ದ ಸ್ಥಳಗಳನ್ನು ತೊರೆದಿದ್ದಾರೆ. ಕಾಡ್ಗಿಚ್ಚು ಪೆಸಿಫಿಕ್ ಕರಾವಳಿಯಿಂದ ಒಳನಾಡಿನ ಪಸಾಡೆನಾವರೆಗೆ ಹಬ್ಬಿದೆ.
ಬೆಂಕಿ ನಂದಿಸಲು ನಿರಂತರ ಪ್ರಯತ್ನ: ಹಾಲಿವುಡ್ನ ವಾಕ್ ಆಫ್ ಫೇಮ್ನಿಂದ 1.6 ಕಿ.ಮೀ ದೂರದಲ್ಲಿ ಈ ಸನ್ಸೆಟ್ ಫೈರ್ (ಇಳಿಸಂಜೆ ಬೆಂಕಿ) ಕಾಣಿಸಿಕೊಂಡಿದ್ದು, ಗ್ರೌಮನ್ಸ್ ಚೈನೀಸ್ ಥಿಯೇಟರ್ ಮತ್ತು ಮೆಡಮ್ಸ್ ಟ್ಯೂಸೆಡ್ನಲ್ಲೂ ಕೂಡ ಬೆಂಕಿಯ ಅಲರಾಂಗಳು ಹೊಡೆದುಕೊಂಡಿವೆ. ಬೆಂಕಿ ಅನಾಹುತಗಳನ್ನು ನಿಯಂತ್ರಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದ್ದು, ಹೆಲಿಕ್ಯಾಪ್ಟರ್ಗಳ ಮೂಲಕ ಆಗಸದಿಂದ ನೀರು ಸುರಿಯಲಾಗುತ್ತಿದೆ. ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿದ ಜನರು ಇಲ್ಲಿನ ಪ್ರಖ್ಯಾತ ಹೋಟೆಲ್ಗಳಿಂದ ಹೊರ ಓಡಿದ್ದಾರೆ.
ಬೆಂಕಿ 12ಕ್ಕೂ ಹೆಚ್ಚು ಶಾಲೆಗಳನ್ನು ಹಾನಿಗೊಳಿಸಿದೆ. ಬಲವಾಗಿ ಬೀಸುತ್ತಿರುವ ಗಾಳಿ ನಮಗೆ ಬೆಂಕಿ ನಂದಿಸಲು ಸವಾಲಾಗಿದೆ ಎಂದು ಲಾಸ್ ಏಜೆಂಲ್ಸ್ ಮೇಯರ್ ಕರೆನ್ ಬಾಸ್ ತಿಳಿಸಿದರು.
ಈಟೊನ್ ಮತ್ತು ಪಲಿಸಡೆಸ್ನಲ್ಲಿ 1,900 ಕಟ್ಟಡಗಳು ಹಾನಿಗೊಂಡಿದ್ದು, ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚುವ ಆತಂಕವಿದೆ. ನೀರು ಪೂರೈಕೆ ವ್ಯವಸ್ಥೆ ಮತ್ತು ವಿದ್ಯುತ್ ಸಂಪರ್ಕಕ್ಕೂ ಕಾಡ್ಗಿಚ್ಚು ಅಡ್ಡಿಯಾಗುತ್ತಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ 4,56,000 ಜನರು ವಿದ್ಯುತ್ ಇಲ್ಲದೇ ಪರದಾಡುವಂತಾಗಿದೆ. ಗಾಳಿಯ ವೇಗ ಹೆಚ್ಚಿರುವ ಕಾರಣ ಅಗ್ನಿಶಾಮಕದಳ ಬೆಂಕಿ ನಂದಿಸುವಲ್ಲಿ ವಿಫಲವಾಗುತ್ತಿದೆ. ಬಲವಾದ ಗಾಳಿ ಈ ಕಾಡ್ಗಿಚ್ಚನ್ನು ಮತ್ತಷ್ಟು ಹರಡುತ್ತಿದೆ ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಚದ್ ಆಗಸ್ಟಿನ್ ಮಾಹಿತಿ ನೀಡಿದ್ದಾರೆ.
ಕಾಡ್ಗಿಚ್ಚು ಅನೇಕ ಹಾಲಿವುಡ್ ಸೆಲೆಬ್ರಿಟಿಗಳ ಮನೆಗಳನ್ನು ಸುಟ್ಟು ಕರಕಲು ಮಾಡಿದೆ. ಲಾಸ್ ಏಂಜಲೀಸ್ ಇತಿಹಾಸವನ್ನೇ ಇದು ಹಾನಿ ಮಾಡುತ್ತಿದೆ. ಮಂಡೆ ಮೊರ್ರೆ, ಕ್ಯಾರಿ ಎಲ್ವೆಸ್ ಮತ್ತು ಪ್ಯಾರಿಸ್ ಹಿಲ್ಟನ್, ಬಿಲ್ಲಿ ಕ್ರಿಸ್ಟಲ್ ಸೇರಿದಂತೆ ಅನೇಕ ನಟ-ನಟಿಯರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ.
ಎಲೆಡೆ ಹರಡುತ್ತಿರುವ ವಿಷಕಾರಿ ಹೊಗೆ: ಸುಟ್ಟ ಪ್ರದೇಶಗಳಲ್ಲಿ ದಟ್ಟ ವಿಷಕಾರಿ ಹೊಗೆ ಹರಡಿದ್ದು, ಜನರು ಎನ್ 95 ಮಾಸ್ಕ್ ಧರಿಸಿ ಓಡಾಡುತ್ತಿದ್ದಾರೆ. ಪಲಿಸಡೆಸ್ ಗ್ರಾಮದಲ್ಲಿ ಸಾರ್ವಜನಿಕ ಗ್ರಂಥಾಲಯ, ಅಂಗಡಿಗಳು, ಬ್ಯಾಂಕ್ ಹಾಗು ಅನೇಕ ಸಭಾಭವನಗಳು ಹಾನಿಯಾಗಿವೆ. ಈ ಗ್ರಾಮ ಇತ್ತೆಂಬ ಸುಳಿವನ್ನೇ ಬೆಂಕಿ ಮರೆಮಾಚಿದೆ. ಕಾಡ್ಗಿಚ್ಚು ಸುಮಾರು 42 ಚ.ಕಿ.ಮೀ ಹರಡಿದ್ದು, ವೇಗವಾಗಿ ಹರಡುತ್ತಿರುವ ಬೆಂಕಿಯಿಂದ ಪರಾಗಲು ಜನರು ಹರಸಾಹಸ ಮಾಡುತ್ತಿದ್ದಾರೆ.
ತುರ್ತು ಪರಿಸ್ಥಿತಿ ಘೋಷಿಸಿದ ಬೈಡನ್: ಅನೇಕ ಹಾಲಿವುಡ್ ಸ್ಟುಡಿಯೋಗಳು ಸಿನಿಮಾ ನಿರ್ಮಾಣವನ್ನು ನಿಲ್ಲಿಸಿವೆ. ಯೂನಿವರ್ಸಲ್ ಸ್ಟುಡಿಯೋದಲ್ಲಿರುವ ಥೀಮ್ ಪಾರ್ಕ್ ಅನ್ನು ಮುಚ್ಚಲಾಗಿದೆ. ಅಧ್ಯಕ್ಷ ಜೋ ಬೈಡನ್ ಸಂತ ಮೊನಿಕಾ ಅಗ್ನಿಶಾಮಕ ಸ್ಥಳಕ್ಕೆ ಭೇಟಿ ನೀಡಿದ್ದು, ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಕ್ಯಾಲಿಪೋರ್ನಿಯಾದಲ್ಲಿ ಕಾಡ್ಗಿಚ್ಚಿನ ರುದ್ರನರ್ತನ; 70 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ, ಸಾವಿರಾರು ಕಟ್ಟಡಗಳು ಬೆಂಕಿಗಾಹುತಿ