ವಾಷಿಂಗ್ಟನ್,ಅಮೆರಿಕ: ಭಾರತ ಮತ್ತು ಅಮೆರಿಕ 2030 ರ ವೇಳೆಗೆ 500 ಶತಕೋಟಿ ಡಾಲರ್ ವ್ಯಾಪಾರಾಭಿವೃದ್ಧಿಯ ಗುರಿ ಹೊಂದಿದ್ದೇವೆ. ಇದಕ್ಕಾಗಿ ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಎರಡು ರಾಷ್ಟ್ರಗಳ ತಂಡಗಳು ಒಟ್ಟಾಗಿ ಕೆಲಸ ಮಾಡಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಘೋಷಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಜನರು ವಿಕಸಿತ ಭಾರತ 2047 ರ ಗುರಿಯತ್ತ ಸಾಗುತ್ತಿರುವಾಗ ಟ್ರಂಪ್ ಅವರ ಧ್ಯೇಯವಾಕ್ಯ MAGA ಬಗ್ಗೆಯೂ ಅಮೆರಿಕದ ಜನರಿಗೆ ಸ್ಪಷ್ಟ ಅರಿವಿದೆ ಎಂದು ಅವರು ಹೇಳಿದರು. ಭಾರತದ ಇಂಧನ ಭದ್ರತೆ ಖಚಿತಪಡಿಸಿಕೊಳ್ಳಲು ಭಾರತ ಮತ್ತು ಅಮೆರಿಕ ತೈಲ ಮತ್ತು ಅನಿಲ ವ್ಯಾಪಾರವನ್ನು ಬಲಪಡಿಸಲು ಬದ್ಧವಾಗಿವೆ ಎಂದು ಇದೇ ವೇಳೆ ಮೋದಿ ಘೋಷಿಸಿದರು.
ಏನಿದು MAGA= MIGA - ಮಗಾ- ಮಿಗಾ ಜಂಟಿ ಕೆಲಸ: ಪ್ರಧಾನಿ ಮೋದಿ,ಅಧ್ಯಕ್ಷ ಟ್ರಂಪ್ ಅವರ ಧ್ಯೇಯವಾಕ್ಯ 'ಮಗಾ ಅಂದರೆ ಮೇಕ್ ಅಮೆರಿಕ ಗ್ರೇಟ್ ಅಗೇನ್' ಬಗ್ಗೆ ಅಮೆರಿಕದ ಜನರಿಗೆ ಚೆನ್ನಾಗಿ ತಿಳಿದಿದೆ. ಇನ್ನು ಭಾರತ ಸಹ ವಿಕಸಿತ ಭಾರತ 2047 ರ ಗುರಿಯತ್ತ ವೇಗವಾಗಿ ಮತ್ತು ದೃಢ ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ. ಹೀಗಾಗಿ ಭಾರತೀಯರು ಕೂಡಾ ತಮ್ಮ ಪರಂಪರೆ ಮತ್ತು ಅಭಿವೃದ್ಧಿಯತ್ತ ಗಮನಹರಿಸಿದ್ದಾರೆ.
ಅಮೆರಿಕದ ಭಾಷೆಯಲ್ಲಿ ಹೇಳುವುದಾದರೆ ಭಾರತವನ್ನು ಮತ್ತೆ ಶ್ರೇಷ್ಠಗೊಳಿಸಿ - MIGA ಮತ್ತು ಅಮೆರಿಕಾ ಒಟ್ಟಾಗಿ ಕೆಲಸ ಮಾಡಿದಾಗ, ಈ MAGA ಜೊತೆಗೆ MIGA ಗುರಿಯನ್ನು ನಾವು ಹೊಂದಿದ್ದೇವೆ. ಈ ನಮ್ಮ ದ್ವಿಪಕ್ಷೀಯ ವ್ಯಾಪಾರವನ್ನು 2030 ರ ವೇಳೆಗೆ USD 500 ಶತಕೋಟಿಗೆ ದ್ವಿಗುಣಗೊಳಿಸಲು ನಾವು ಬದ್ಧವಾಗಿದ್ದೇವೆ. ನಮ್ಮ ತಂಡಗಳು ಪರಸ್ಪರ ಲಾಭದಾಯಕ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸುವಲ್ಲಿ ಕೆಲಸ ಮಾಡುತ್ತವೆ ಎಂದು ಪ್ರಧಾನಿ ಮೋದಿ ಘೋಷಿಸಿದರು.
ಭಾರತ ಮತ್ತು ಅಮೆರಿಕದ ಜಂಟಿ ಅಭಿವೃದ್ಧಿ, ಜಂಟಿ ಉತ್ಪಾದನೆ ಮತ್ತು ತಂತ್ರಜ್ಞಾನದ ವರ್ಗಾವಣೆಯ ದಿಕ್ಕಿನಲ್ಲಿ ನಾವು ಮುನ್ನಡೆಯುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಪ್ರಕಟಿಸಿದರು. ಭಾರತ ಮತ್ತು ಅಮೆರಿಕ ನಡುವಣ ಪಾಲುದಾರಿಕೆ ಮತ್ತು ಸಹಕಾರವು ಒಟ್ಟಾಗಿ ಉತ್ತಮ ಜಗತ್ತನ್ನು ರೂಪಿಸುತ್ತದೆ ಎಂದು ಅವರು ಇದೇ ವೇಳೆ ಅವರು ಪ್ರತಿಪಾದಿಸಿದರು.
ಇಂಧನ ಮೂಲ ಸೌಕರ್ಯ ಹೆಚ್ಚಿಸಲು ಪರಸ್ಪರ ಕೆಲಸ: ಭಾರತದ ಇಂಧನ ಭದ್ರತೆ ಖಚಿತಪಡಿಸಿಕೊಳ್ಳಲು ನಾವು ತೈಲ ಮತ್ತು ಅನಿಲ ವ್ಯಾಪಾರ ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲಿದ್ದೇವೆ. ಪರಮಾಣು ಶಕ್ತಿ ವಲಯದಲ್ಲಿ ನಾವು ನಮ್ಮ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳು ಬಗ್ಗೆ ಮಾತನಾಡಿದ್ದೇವೆ. ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳ ದಿಕ್ಕಿನಲ್ಲಿ ಭಾರತದ ರಕ್ಷಣಾ ಸನ್ನದ್ಧತೆಯಲ್ಲಿ ಅಮೆರಿಕ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ಆತ್ಮೀಯ ಸ್ವಾಗತ ಮತ್ತು ಉತ್ತಮ ಆತಿಥ್ಯ ನೀಡಿದ್ದಕ್ಕಾಗಿ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಇದೇ ವೇಳೆ ಕೃತಜ್ಞತೆ ಸಲ್ಲಿಸಿದರು. ಮೊದಲು ನನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರನ್ನು ಆತ್ಮೀಯ ಸ್ವಾಗತ ಮತ್ತು ಉತ್ತಮ ಆತಿಥ್ಯಕ್ಕಾಗಿ ನಾನು ಧನ್ಯವಾದ ಹೇಳುತ್ತೇನೆ. ಅಧ್ಯಕ್ಷ ಟ್ರಂಪ್ ಅವರು ಭಾರತ ಮತ್ತು ಅಮೆರಿಕ ನಡುವಣ ಸಂಬಂಧವನ್ನು ಗಟ್ಟಿಗೊಳಿಸಲು ಶ್ರಮಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ನಾಯಕತ್ವದ ಮೂಲಕ ಅದನ್ನು ಜೀವಂತಗೊಳಿಸಿದ್ದಾರೆ. ಅವರ ಮೊದಲ ಅವಧಿಯಲ್ಲಿ ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ, ಅದೇ ಉತ್ಸಾಹ, ಶಕ್ತಿ ಮತ್ತು ಸಮರ್ಪಣೆಯ ಬಗ್ಗೆ ಇಂದು ನಾವು ಆಳವಾಗಿ ಚರ್ಚಿಸಿದ್ದೇವೆ. ಪರಸ್ಪರ ನಂಬಿಕೆ ಮತ್ತು ಹೊಸ ಗುರಿಗಳನ್ನು ಸಾಧಿಸುವ ನಿರ್ಣಯವೂ ಇತ್ತು. ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆ ಮತ್ತು ಸಹಕಾರವು ಉತ್ತಮ ಜಗತ್ತನ್ನು ರೂಪಿಸುತ್ತದೆ ಎಂದು ನಾವು ನಂಬುತ್ತೇವೆ ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.
ಪರಸ್ಪರ ಅಪ್ಪುಗೆಯ ಶುಭಾಶಯ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಶ್ವೇತಭವನದಲ್ಲಿ ಪರಸ್ಪರ ಅಪ್ಪುಗೆ ಮೂಲಕ ಬಾಂಧವ್ಯವನ್ನು ತೋರ್ಪಡಿಸಿಕೊಂಡರು. ಟ್ರಂಪ್ ಮತ್ತು ಪ್ರಧಾನಿ ಮೋದಿ ಪರಸ್ಪರ ಹಸ್ತಲಾಘವ ಮಾಡಿ ಆತ್ಮೀಯವಾಗಿ ಶುಭಾಶಯ ಕೋರಿದರು. ಪ್ರಧಾನಿ ಮೋದಿಯನ್ನು ಭೇಟಿಯಾದಾಗ ಟ್ರಂಪ್, ನಾವು ನಿಮ್ಮನ್ನು ಮಿಸ್ ಮಾಡಿಕೊಂಡಿದ್ದೇವೆ, ನಾವು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ಅಧ್ಯಕ್ಷ ಟ್ರಂಪ್ ಅವರ ಅಧಿಕಾರ ಸ್ವೀಕಾರದ ನಂತರ ಅಮೆರಿಕಕ್ಕೆ ಭೇಟಿ ನೀಡಿದ ಮೊದಲ ಕೆಲವೇ ಕೆಲವು ವಿಶ್ವ ನಾಯಕರಲ್ಲಿ ಪ್ರಧಾನಿ ಮೋದಿ ಕೂಡಾ ಸೇರ್ಪಡೆಯಾಗಿದ್ದಾರೆ. ಅಮೆರಿಕದ ನೂತನ ಆಡಳಿತ ಅಧಿಕಾರ ವಹಿಸಿಕೊಂಡ ಮೂರು ವಾರಗಳಲ್ಲೇ ಭಾರತದ ಪ್ರಧಾನಿ ಅಮೆರಿಕ ಪ್ರವಾಸ ಕೈಗೊಂಡಿರುವುದು ವಿಶೇಷ
ಇದನ್ನು ಓದಿ: ಅಮೆರಿಕದ ಗುಪ್ತಚರ ವಿಭಾಗಕ್ಕೆ ತುಳಸಿ ಗಬ್ಬಾರ್ಡ್ ನಿರ್ದೇಶಕಿ; ಮಹತ್ವದ ಹುದ್ದೆಗೇರಿದ ಮೊದಲ ಹಿಂದೂ ನಾಯಕಿ
ಅಮೆರಿಕಕ್ಕೆ ಆಗಮಿಸಿದ ಮೋದಿಗೆ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತ: ಇಂದು ಮಸ್ಕ್ ಭೇಟಿ ಸಾಧ್ಯತೆ