ಕರ್ನಾಟಕ

karnataka

ETV Bharat / international

ವೆಸ್ಟ್​ ಬ್ಯಾಂಕ್​ ಮೇಲೆ ಇಸ್ರೇಲ್ ದಾಳಿಯಲ್ಲಿ 29 ಸಾವು: ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಹಮಾಸ್ - Israeli Hamas War

ವೆಸ್ಟ್​ ಬ್ಯಾಂಕ್​ನಲ್ಲಿ ಬುಧವಾರದಿಂದ ಆರಂಭವಾಗಿರುವ ಇಸ್ರೇಲ್ ಸೇನಾ ಕಾರ್ಯಾಚರಣೆಯಲ್ಲಿ 29 ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದಾರೆ.

ಗಾಜಾ ಯುದ್ಧದ ದೃಶ್ಯ
ಗಾಜಾ ಯುದ್ಧದ ದೃಶ್ಯ (IANS)

By ETV Bharat Karnataka Team

Published : Sep 3, 2024, 2:25 PM IST

ರಮಲ್ಲಾ: ವೆಸ್ಟ್​ ಬ್ಯಾಂಕ್​ನಲ್ಲಿ ಬುಧವಾರದಿಂದ ಆರಂಭವಾಗಿರುವ ಇಸ್ರೇಲ್ ಸೇನಾ ಕಾರ್ಯಾಚರಣೆಯಲ್ಲಿ 29 ಪ್ಯಾಲೆಸ್ಟೈನಿಯರು ಮೃತಪಟ್ಟಿದ್ದು, 121 ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೈನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಜೆನಿನ್​ನಲ್ಲಿ 18, ತುಬಾಸ್​ನಲ್ಲಿ ನಾಲ್ವರು ಮತ್ತು ತುಲ್ಕರ್ಮ್​ನಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ರಮಲ್ಲಾ ಮೂಲದ ಆರೋಗ್ಯ ಸಚಿವಾಲಯ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.

ಇಸ್ರೇಲಿ ಪಡೆಗಳು ಸೋಮವಾರ ಸತತ ಆರನೇ ದಿನವೂ ಜೆನಿನ್ ಮತ್ತು ಅಲ್ಲಿನ ಶಿಬಿರಗಳ ಮೇಲೆ ದಾಳಿಯನ್ನು ಮುಂದುವರಿಸಿವೆ ಎಂದು ಪ್ಯಾಲೆಸ್ಟೈನ್ ಅಧಿಕೃತ ಮಾಧ್ಯಮ ವಾಫಾ ಅನ್ನು (WAFA) ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಏತನ್ಮಧ್ಯೆ, ಜೆನಿನ್​ನಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಮತ್ತು ಇಲ್ಲಿಯವರೆಗೆ ಗುಂಡಿನ ಚಕಮಕಿ ಮತ್ತು ವೈಮಾನಿಕ ದಾಳಿಯಲ್ಲಿ 14 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ, ಸುಮಾರು 20 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 25 ಉಗ್ರರನ್ನು ಬಂಧಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಸೋಮವಾರ ಹೇಳಿಕೆಯಲ್ಲಿ ತಿಳಿಸಿವೆ.

ಮಿಲಿಟರಿ ಒತ್ತಡದ ಮೂಲಕ ಒತ್ತೆಯಾಳುಗಳನ್ನು ಬಿಡಿಸಿಕೊಳ್ಳಲು ಯತ್ನಿಸಿದರೆ ಅವರ ಶವಗಳನ್ನು ಅವರ ಕುಟುಂಬಗಳಿಗೆ ರವಾನೆ ಮಾಡಲಾಗುವುದು ಎಂದು ಹಮಾಸ್ ಇಸ್ರೇಲ್​ಗೆ ಎಚ್ಚರಿಕೆ ನೀಡಿದೆ.

"ಒತ್ತೆಯಾಳುಗಳನ್ನು ಬಂಧಿಸಿ ಇಡಲಾಗಿರುವ ಸ್ಥಳದ ಹತ್ತಿರಕ್ಕೆ ಇಸ್ರೇಲಿ ಸೇನೆ ಬಂದಲ್ಲಿ ಅವರನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಅವರನ್ನು ಕಾಯುವ ಜವಾಬ್ದಾರಿ ಹೊತ್ತಿರುವ ಹೋರಾಟಗಾರರಿಗೆ ಹೊಸ ಸೂಚನೆಗಳನ್ನು ನೀಡಲಾಗಿದೆ" ಎಂದು ಹಮಾಸ್​ನ ಮಿಲಿಟರಿ ವಿಭಾಗವಾದ ಅಲ್-ಖಸ್ಸಾಮ್ ಬ್ರಿಗೇಡ್ ವಕ್ತಾರ ಅಬು ಒಬೈದಾ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಕದನ ವಿರಾಮ ಒಪ್ಪಂದದ ಬದಲಾಗಿ ಮಿಲಿಟರಿ ಬಲದಿಂದ ಕೈದಿಗಳನ್ನು ಬಿಡಿಸಿಕೊಳ್ಳುವ ನೆತನ್ಯಾಹು ಅವರ ಪ್ರಯತ್ನಗಳು ಒತ್ತೆಯಾಳುಗಳ ಸಾವಿಗೆ ಕಾರಣವಾಗಲಿದೆ. ಒತ್ತೆಯಾಳುಗಳು ಜೀವಂತವಾಗಿ ಬರಬೇಕೆ ಅಥವಾ ಶವಗಳಾಗಿ ಬರಬೇಕೆ ಎಂಬುದನ್ನು ಅವರ ಕುಟುಂಬಸ್ಥರೇ ನಿರ್ಧರಿಸಲಿ" ಎಂದು ಅವರು ಹೇಳಿದರು.

ಹಮಾಸ್​ ಒತ್ತೆಯಾಳಾಗಿರಿಸಿಕೊಂಡಿದ್ದ ಇಬ್ಬರು ಮಹಿಳೆಯರು ಮತ್ತು ನಾಲ್ವರು ಪುರುಷರ ಶವಗಳು ಗಾಜಾದಲ್ಲಿ ಇತ್ತೀಚೆಗೆ ಪತ್ತೆಯಾಗಿದ್ದವು. ಸೈನಿಕರು ಅವರಿದ್ದ ಸ್ಥಳಕ್ಕೆ ತಲುಪುವ ಕೆಲ ಹೊತ್ತಿಗೆ ಮುಂಚೆ ಅವರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ತಿಳಿಸಿದೆ. ಗಾಜಾದಲ್ಲಿ ಬಂಧಿತರಾಗಿರುವ ಒತ್ತೆಯಾಳುಗಳನ್ನು ಮರಳಿ ಕರೆತರಲು ಹಮಾಸ್​ನೊಂದಿಗೆ ಕದನ ವಿರಾಮ ಮಾತುಕತೆ ನಡೆಸುವಂತೆ ನೆತನ್ಯಾಹು ಅವರಿಗೆ ಒತ್ತಾಯಿಸಿ ಲಕ್ಷಾಂತರ ಇಸ್ರೇಲಿಗಳು ಭಾನುವಾರ ಇಸ್ರೇಲ್​ನಾದ್ಯಂತ ಪ್ರತಿಭಟನೆಗಳನ್ನು ನಡೆಸಿದರು.

ಇದನ್ನೂ ಓದಿ: ಫಿಲಡೆಲ್ಫಿ ಕಾರಿಡಾರ್​ ಎಲ್ಲಿದೆ?: ಇಸ್ರೇಲ್​ಗೆ ಇದು ಯಾಕಿಷ್ಟು ಮಹತ್ವದ್ದು? - Philadelphi Corridor

ABOUT THE AUTHOR

...view details