ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಜನನಿಬಿಡ ರೈಲು ನಿಲ್ದಾಣದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, 21 ಜನ ಸಾವನ್ನಪ್ಪಿ, 46 ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ. ಬಲೂಚಿಸ್ತಾನದ ರಾಜಧಾನಿ ಕ್ವೆಟ್ಟಾ ರೈಲು ನಿಲ್ದಾಣದಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲು ಪೇಶಾವರಕ್ಕೆ ಹೊರಡುವ ಮುನ್ನ ಈ ಭಾರೀ ಸ್ಫೋಟ ಸಂಭವಿಸಿದ್ದು, ಈ ವೇಳೆ ರೈಲು ನಿಲ್ದಾಣದಲ್ಲಿ ಹೆಚ್ಚು ಜನರು ಸೇರಿದ್ದರು.
ಘಟನೆ ಕುರಿತು ಮಾತನಾಡಿರುವ ಕ್ವೆಟ್ಟಾದ ಹಿರಿಯ ಸೂಪರಿಟೆಂಡೆಂಟ್ ಪೊಲೀಸ್ ಅಧಿಕಾರಿ ಮೊಹಮ್ಮದ್ ಬಲೊಚ್, ಆರಂಭದಲ್ಲಿ ಇದನ್ನು ಆತ್ಮಾಹುತಿ ಬಾಂಬ್ ದಾಳಿ ಎಂದು ಶಂಕಿಸಲಾಗಿದೆ. ಸ್ಫೋಟದ ತೀವ್ರತೆಗೆ 21 ಜನರು ಸಾವನ್ನಪ್ಪಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದಿದ್ದಾರೆ.
ಈ ಸ್ಫೋಟದ ಹೊಣೆಯಲ್ಲಿ ಬಲೊಚ್ ಲಿಬರೇಷನ್ ಆರ್ಮಿ (ಬಿಎಲ್ಎ) ಹೊತ್ತುಕೊಂಡಿದೆ. ಪ್ರಾಥಮಿಕ ವರದಿ ಪ್ರಕಾರ, ರೈಲ್ವೆ ನಿಲ್ದಾಣದ ಬುಕ್ಕಿಂಗ್ ಕಚೇರಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಘಟನೆ ಬೆನ್ನಲ್ಲೇ ತಕ್ಷಣಕ್ಕೆ ರಕ್ಷಣಾ ಮತ್ತು ಕಾನೂನು ಜಾರಿ ತಂಡ ಸ್ಥಳಕ್ಕೆ ಆಗಮಿಸಿದ್ದು, ಪ್ರದೇಶವನ್ನು ಸುತ್ತುವರೆಯಿತು. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣಕ್ಕೆ ಕ್ವೆಟ್ಟಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರಾಂತ್ಯದ ಸರ್ಕಾರಿ ವಕ್ತಾರ ಶಹೀದ್ ರಿಂದ್ ತಿಳಿಸಿದ್ದಾರೆ.