ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 33 ಮಂದಿಯ ವಿರುದ್ಧ ಸಾಮೂಹಿಕ ಕೊಲೆ ಪ್ರಕರಣ ದಾಖಲಿಸುವಂತೆ ರವಿವಾರ ಬಾಂಗ್ಲಾದೇಶದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. 2013ರಲ್ಲಿ ಹೆಫಾಜತ್-ಎ-ಇಸ್ಲಾಂ ಆಯೋಜಿಸಿದ್ದ ರ್ಯಾಲಿ ಮೇಲೆ ವಿವೇಚನಾರಹಿತವಾಗಿ ಗುಂಡು ಹಾರಿಸಿ ಸಾಮೂಹಿಕ ಹತ್ಯೆ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಬಾಂಗ್ಲಾದೇಶ ಪೀಪಲ್ಸ್ ಪಾರ್ಟಿ (ಬಿಪಿಪಿ) ಅಧ್ಯಕ್ಷ ಬಾಬುಲ್ ಸರ್ದಾರ್ ಚಖಾರಿ ಅವರು ಢಾಕಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಝಾಕಿ-ಅಲ್-ಫರಾಬಿ ನ್ಯಾಯಾಲಯದಲ್ಲಿ ಈ ಕುರಿತಾದ ಅರ್ಜಿ ಸಲ್ಲಿಸಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. 2013ರ ಮೇ 5ರಂದು ಮೋತಿಜೀಲ್ ನ ಶಾಪ್ಲಾ ಚಟ್ಟರ್ನಲ್ಲಿ ನಡೆದ ರ್ಯಾಲಿಯಲ್ಲಿ ಸಾಮೂಹಿಕ ಹತ್ಯೆ ನಡೆದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ನ್ಯಾಯಾಲಯವು ವಾದಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಈ ವಿಷಯದ ಬಗ್ಗೆ ನಂತರ ಆದೇಶ ಹೊರಡಿಸುವುದಾಗಿ ಹೇಳಿದೆ.
ಅಲ್ಲಿಗೆ ಈಗ ಬಾಂಗ್ಲಾದೇಶದಲ್ಲಿ ಹಸೀನಾ ವಿರುದ್ಧ ಎಂಟು ಕೊಲೆ, ಒಂದು ಅಪಹರಣ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ನರಮೇಧ ಸೇರಿದಂತೆ 11 ಪ್ರಕರಣಗಳು ದಾಖಲಾಗಿವೆ. ಬಾಂಗ್ಲಾದೇಶದಲ್ಲಿ ಉಂಟಾದ ಆಂತರಿಕ ಗಲಭೆಗಳ ನಂತರ ಆಗಸ್ಟ್ 5ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ 76 ವರ್ಷದ ಶೇಖ್ ಹಸೀನಾ ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.