Causes of Hair Loss in Teenagers :ಯುವಜನರಲ್ಲಿ ಕೂದಲು ಉದುರುವಿಕೆ ಸಮಸ್ಯೆಯು ಸಾಮಾನ್ಯವಾಗುತ್ತಿದೆ. ಪುರುಷರು ಮಾತ್ರವಲ್ಲದೇ, ಮಹಿಳೆಯರು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜಿಎಂಸಿ ಶ್ರೀನಗರದ ಚರ್ಮರೋಗ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ.ಶಾಜಿಯಾ ಜಿಲಾನಿ ಅವರು ಈಟಿವಿ ಭಾರತ ಜೊತೆ ಮಾತನಾಡಿ, ಯುವಕರಲ್ಲಿ ಕೂದಲು ಉದುರುವಿಕೆಗೆ ಕಾರಣಗಳು, ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ವಿವರವಾಗಿ ತಿಳಿಸಿದ್ದಾರೆ.
ಸಾಮಾನ್ಯವಾಗಿ ದಿನಕ್ಕೆ ಎಷ್ಟು ಕೂದಲು ಉದುರುತ್ತೆ ಗೊತ್ತಾ ?ಸರಾಸರಿ ಮನುಷ್ಯನ ತಲೆಯಲ್ಲಿ ಒಂದರಿಂದ ಒಂದೂವರೆ ಲಕ್ಷ ಕೂದಲುಗಳು ಇರುತ್ತವೆ. ಇವುಗಳಲ್ಲಿ ಪ್ರತಿದಿನ ಸಾಮಾನ್ಯ 50 ರಿಂದ 100 ಕೂದಲುಗಳು ಉದುರುತ್ತವೆ. ಉದುರುವ ಕೂದಲುಗಳ ಸಂಖ್ಯೆಯು 100 ಮೀರಿದರೆ ಅದು ಸಮಸ್ಯೆಯಾಗಿ ಪರಿಣಮಿಸುತ್ತದೆ. ತಕ್ಷಣವೇ ಸಂಬಂಧಪಟ್ಟವರಿಗೆ ಚಿಕಿತ್ಸೆಯ ಅಗತ್ಯವಿದೆ ಎಂದು ಡಾ. ಶಾಜಿಯಾ ಜಿಲಾನಿ ಹೇಳುತ್ತಾರೆ. ಭಾರತದಲ್ಲಿ ನಡೆಸಿದ ಅಧ್ಯಯನದ ಪ್ರಕಾರ, 50 ವರ್ಷ ವಯಸ್ಸಿನ ಹೊತ್ತಿಗೆ ಸುಮಾರು 50 ಪ್ರತಿಶತ ಪುರುಷರು ಹಾಗೂ 40 ಪ್ರತಿಶತ ಮಹಿಳೆಯರು ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಶಾಜಿಯಾ ಜಿಲಾನಿ ಅವರು, ಕೂದಲು ಉದುರುವಿಕೆಯಲ್ಲಿ ಎರಡು ಪ್ರಮುಖ ವಿಧಗಳಿದ್ದು, ಗುರುತುಗಳಿರುವ ಅಲೋಪೆಸಿಯಾ ಹಾಗೂ ಗುರುತುಗಳಿಲ್ಲದ ಅಲೋಪೆಸಿಯಾ. ಸ್ಕಾರ್ಪಿಂಗ್ ಅಲೋಪೆಸಿಯಾದಲ್ಲಿ ಕೂದಲಿನ ಬೇರುಗಳು ಸಂಪೂರ್ಣವಾಗಿ ನಾಶವಾಗುತ್ತವೆ. ಇದರಿಂದಾಗಿ ಕೂದಲು ಮತ್ತೆ ಬೆಳೆಯಲು ಸಾಧ್ಯವಾಗುವುದಿಲ್ಲ. ಗುರುತುಗಳಿಲ್ಲದ ಅಲೋಪೆಸಿಯಾದಲ್ಲಿ ಬೇರುಗಳು ಆರೋಗ್ಯಕರವಾಗಿರುತ್ತವೆ. ಇದು ಕೂದಲು ಮತ್ತೆ ಬೆಳೆಯಲು ಅನುವು ಮಾಡಿಕೊಡುತ್ತದೆ ಎಂದು ವಿವರಿಸುತ್ತಾರೆ.
ಬದಲಾದ ಜೀವನಶೈಲಿ :ಇತ್ತೀಚಿನ ವರ್ಷಗಳಲ್ಲಿ 15 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಲ್ಲಿಯೂ ಕೂದಲು ಉದುರುವಿಕೆಯ ಸಮಸ್ಯೆ ಕಂಡುಬರುತ್ತಿದೆ. ಇದು ಕಳವಳಕಾರಿ ವಿಷಯವಾಗಿದೆ. ಅತಿಯಾದ ಕೂದಲು ಉದುರುವಿಕೆಗೆ ಕಾರಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಬದಲಾದ ಜೀವನಶೈಲಿಯ ಅಂಶಗಳು, ವೈಯಕ್ತಿಕ ಅಥವಾ ಆನುವಂಶಿಕ ಬದಲಾವಣೆಗಳು ಹಾಗೂ ಆರೋಗ್ಯ ಸ್ಥಿತಿಗಳನ್ನು ಒಳಗೊಂಡಿರಬಹುದು. ಸಾಮಾನ್ಯ ಕಾರಣಗಳಲ್ಲಿ ಒಂದು ಆಂಡ್ರೊಜೆನಿಕ್ ಅಲೋಪೆಸಿಯಾ, ಇದು ಪುರುಷರಲ್ಲಿ ಸಾಮಾನ್ಯವಾಗಿದೆ ಹಾಗೂ ಮಹಿಳೆಯರಲ್ಲಿ ಅಪರೂಪವಾಗಿದೆ. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಥೈರಾಯ್ಡ್ ಅಸ್ವಸ್ಥತೆಗಳು ಅಥವಾ ನೈಸರ್ಗಿಕ ಹಾರ್ಮೋನುಗಳ ಬದಲಾವಣೆಗಳಂತಹ ಹಾರ್ಮೋನುಗಳ ಅಸಮತೋಲನವು ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ತಿಳಿಸುತ್ತಾರೆ.
ಔಷಧಿಗಳು & ವೈದ್ಯಕೀಯ ಚಿಕಿತ್ಸೆ :ಕೆಲವು ಔಷಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳಿಂದಲೂ ಕೂದಲು ಉದುರುವಿಕೆ ಸಂಭವಿಸಬಹುದು. ಇವುಗಳಲ್ಲಿ ಸಾಮಾನ್ಯವಾದವು ಕ್ಯಾನ್ಸರ್ ರೋಗಿಗಳಿಗೆ ಕೀಮೋಥೆರಪಿ, ರೇಡಿಯೊಥೆರಪಿ. ದುರ್ಬಲಗೊಂಡ ರೋಗನಿರೋಧಕ ಶಕ್ತಿಯೂ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಇದನ್ನು ನಿಯಮಿತ ಚಿಕಿತ್ಸೆಯಿಂದ ನಿಯಂತ್ರಿಸಬಹುದು. ಕೆಲವು ಶಿಲೀಂಧ್ರ ಸೋಂಕುಗಳು, ತೀವ್ರವಾದ ತಲೆಹೊಟ್ಟು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಕೂದಲು ಉದುರುವಿಕೆಗೆ ಮತ್ತಷ್ಟು ಕಾರಣವಾಗಬಹುದು. ಆರೋಗ್ಯ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡ ಅನುಭವಿಸುತ್ತಿರುವ ವ್ಯಕ್ತಿಗಳಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಆಧಾರವಾಗಿರುವ ಸಮಸ್ಯೆಗಳನ್ನು ಬಗೆಹರಿದ ನಂತರ ಅದು ಸಾಮಾನ್ಯವಾಗಿ ಕಡಿಮೆಯಾಗುತ್ತದೆ ಎಂದು ಡಾ. ಶಾಜಿಯಾ ಜಿಲಾನಿ ಹೇಳಿದರು.