ನವದೆಹಲಿ: ಫೇರ್ನೆಸ್ ಕ್ರೀಂಗಳ ಬಳಕೆಯು ಭಾರತದಲ್ಲಿ ಮೂತ್ರಪಿಂಡದ ಸಮಸ್ಯೆಗಳ ಏರಿಕೆಗಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ವಿಷಯವೊಂದು ಹೊಸ ಅಧ್ಯಯನದಲ್ಲಿ ಬಯಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಫೇರ್ನೆಸ್ ಕ್ರೀಂಗಳ ಹಾವಳಿ ಹೆಚ್ಚಿದ್ದು, ಸಮಾಜವೂ ಕೂಡ ಇಂತಹ ಫೇರ್ನೆಸ್ ಕ್ರೀಂಗಳ ವ್ಯಾಮೋಹಕ್ಕೆ ಹೆಚ್ಚು ಒಳಗಾಗಿದೆ. ಆದರೆ, ಈ ಫೇರ್ನೆಸ್ ಕ್ರೀಂಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಇರುವುದರಿಂದ ಇವು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಅಧ್ಯಯನವನ್ನು ಕಿಡ್ನಿ ಇಂಟರ್ನ್ಯಾಷನಲ್ ಎಂಬ ವೈದ್ಯಕೀಯ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಅಧಿಕ ಪಾದರಸ ಅಂಶ ಹೊಂದಿರುವ ಫೇರ್ನೆಸ್ ಕ್ರೀಮ್ಗಳ ಬಳಕೆಯು ಮೆಂಬರೇನಸ್ ನೆಫ್ರೋಪತಿ (ಎಂಎನ್) ಪ್ರಕರಣಗಳಿಗೆ ಕಾರಣವಾಗುತ್ತದೆ. ಇದು ಕಿಡ್ನಿಯ ಫಿಲ್ಟರ್ ಅನ್ನು ಹಾನಿ ಮಾಡಿ, ಪ್ರೊಟೀನ್ ಸೋರಿಕೆಗೆ ಕಾರಣವಾಗುತ್ತದೆ. ಎಂಎನ್ ಎಂಬುದು ಸ್ವಯಂ ನಿರೋಧಕ ರೋಗವಾಗಿದ್ದು, ಇದು ನೆಪ್ರೊಟಿಕ್ ಸಿಂಡ್ರೋಮ್ ಅಂದರೆ ದೇಹದಲ್ಲಿ ಹೆಚ್ಚಿನ ಪ್ರೋಟಿನ್ ಅನ್ನು ಮೂತ್ರದ ಮೂಲಕ ಹೊರ ಹಾಕುವ ಕಿಡ್ನಿ ಸಮಸ್ಯೆ ಆಗಿದೆ.
ದೇಹಕ್ಕೆ ಸೇರುತ್ತಿದೆ ಪಾದರಸ: ಪಾದರಸವೂ ತ್ವಚೆಯಲ್ಲಿ ಸುಲಭವಾಗಿ ಸೇರುತ್ತದೆ. ಇದು ಮೂತ್ರಪಿಂಡದ ಫಿಲ್ಟರ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೆಪ್ರೊಟಿಕ್ ಸಿಂಡ್ರೋಮ್ ಪ್ರಕರಣಗಳು ಏರಿಕೆ ಕಾರಣವಾಗುತ್ತಿದೆ ಎಂದು ಈ ಅಧ್ಯಯನದ ಸಂಶೋಧಕರಲ್ಲಿ ಒಬ್ಬರಾದ ಕೇರಳದ ಕೊಟ್ಟಕಲ್ನ ಅಸ್ಟರ್ ಮಿಮ್ಸ್ ಆಸ್ಪತ್ರೆಯ ನೆಪ್ರೋಲಾಜಿ ವಿಭಾಗದ ಡಾ ಸಜೀಶ್ ಸಿವದಾಸ್ ತಿಳಿಸಿದ್ದಾರೆ.
ಇಂತಹ ಕ್ರೀಮ್ಗಳು ಭಾರತದಲ್ಲಿ ಅನಿಯಂತ್ರಿತ ಮಾರುಕಟ್ಟೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಉತ್ತಮ ಫಲಿತಾಂಶ ಪಡೆಯಬಹುದು ಎಂಬ ಭರವಸೆಯನ್ನು ಕೂಡ ನೀಡುತ್ತವೆ. ಆದರೆ ಇವುಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿ ಬೆಲೆ ತೆರುವಂತೆ ಮಾಡುತ್ತವೆ. ಅಂದ ಹಾಗೆ ಅಧ್ಯಯನ 2021ರ ಜುಲೈ ಮತ್ತು ಸೆಪ್ಟೆಂಬರ್ 2023ರ ನಡುವೆ ನಡೆಲಾಯಿತು. ಈ ಸಂಶೋಧನೆ ವೇಳೆ 22 ಎಂಎನ್ ಪ್ರಕರಣಗಳನ್ನು ಪರೀಕ್ಷಿಸಲಾಗಿದೆ.