ಹೈದರಾಬಾದ್: ದೇಹದ ಆರೋಗ್ಯದಲ್ಲಿ ಪಾದಗಳ ಕಾಳಜಿಯೂ ಮುಖ್ಯ. ಇದೇ ಕಾರಣಕ್ಕೆ ಪಾದಗಳ ಆರೋಗ್ಯಕ್ಕೆ ವಿಶೇಷ ಒತ್ತು ನೀಡಲು ಹೈದರಾಬಾದ್‌ನ ರಾಯದುರ್ಗದ ಬಿಎನ್‌ಆರ್ ಹಿಲ್ಸ್ ಕಾಲೊನಿಯಲ್ಲಿ ಕಿಮ್ಸ್ ಆಸ್ಪತ್ರೆಯ ಸಿಎಂಡಿ ಡಾ.ಭಾಸ್ಕರ್ ರಾವ್ ಅವರು 'ದಿ ಫುಟ್ ಡಾಕ್ಟರ್' ಎಂಬ ಹೊಸ ಆಸ್ಪತ್ರೆಯನ್ನು ಭಾನುವಾರ ಉದ್ಘಾಟಿಸಿದ್ದಾರೆ.
ಬಳಿಕ ಮಾತನಾಡಿದ ಡಾ.ರಾವ್, "ನಾವು ಕಾಲಿನ ಸಮಸ್ಯೆಗಳ ಕುರಿತು ತಿಳಿಯುವುದು ಅವಶ್ಯಕ. ಅತಿಯಾದ ಧೂಮಪಾನ, ಮಧುಮೇಹ, ಅಧಿಕ ರಕ್ತದೊತ್ತಡ, ಸರಿಯಲ್ಲದ ನಡಿಗೆ ಮತ್ತು ಪಾದರಕ್ಷೆಗಳು ಕಾಲಿನಲ್ಲಿ ಸಮಸ್ಯೆ ಉದ್ಭವಿಸುವ ಪ್ರಮುಖ ನಾಲ್ಕು ಕಾರಣಗಳು. ಊತ ಅಥವಾ ಜೋಡಣೆ ಸಮಸ್ಯೆಗಳಂತಹ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದಲೂ ಭವಿಷ್ಯದಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗಬಹುದು" ಎಂದರು.
"ಆಸ್ಪತ್ರೆಯಲ್ಲಿ ಹೈಪರ್ಬ್ಯಾರಿಕ್ ಆಕ್ಸಿಜನ್ ಥೆರಪಿ ಸೇರಿದಂತೆ ಸುಧಾರಿತ ಚಿಕಿತ್ಸೆಗಳ ಆಯ್ಕೆಯನ್ನು ನೀಡಲಾಗಿದೆ. ಇದು ಪಾದದ ಗಾಯ ಮತ್ತು ರಕ್ತ ಸಂಚಾರವನ್ನು ಸುಧಾರಿಸುತ್ತದೆ. ಕಾಲಿನ ಸಮಸ್ಯೆಗಳನ್ನು ಆಧುನಿಕ ಸಾಧನಗಳ ಮೂಲಕ ಪರಿಣಾಮಕಾರಿಯಾಗಿ ಆಸ್ಪತ್ರೆ ಪತ್ತೆ ಮಾಡುತ್ತದೆ" ಎಂದು ತಿಳಿಸಿದರು.
'ದಿ ಫುಟ್ ಡಾಕ್ಟರ್'ನ ರಕ್ತನಾಳ ಸರ್ಜನ್ ಡಾ.ನರೇಂದ್ರನಾಥ್ ಮೆದ ಮಾತನಾಡಿ, "ಪಾದದ ಆರೋಗ್ಯಕ್ಕೆ ಪರಿಣಾಮಕಾರಿ ಮತ್ತು ವಿಶೇಷ ಆರೈಕೆ ನೀಡಲು ಆಸ್ಪತ್ರೆ ಬದ್ಧವಾಗಿದೆ" ಎಂದರು.
"ಈ ಸೌಲಭ್ಯವು ಒಟ್ಟಾರೆ ಆರೋಗ್ಯದ ನಿರ್ಣಾಯಕ ಮತ್ತು ಆಗಾಗ್ಗೆ ಕಡೆಗಣಿಸಲ್ಪಟ್ಟಿರುವ ಅಂಶವನ್ನು ಪರಿಹರಿಸುವ ಗುರಿ ಹೊಂದಿದೆ. ಕಾಲು ಮತ್ತು ಪಾದದ ಕಾಯಿಲೆಗಳನ್ನು ಹೊಂದಿರುವ ರೋಗಿಗಳಿಗೆ ಸಮಗ್ರ ಆರೈಕೆಯ ಬಗ್ಗೆ ನಾವು ಖಾತ್ರಿ ನೀಡುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ನಿಮ್ಮ ಕಣ್ಣಿನ ದೃಷ್ಟಿ ಕ್ಷೀಣಿಸುತ್ತಿದೆಯೇ? ನಿಮ್ಮ ಐ ಸೈಟ್ ಸುಧಾರಿಸಲು ಈ ಯೋಗಾಸನಗಳು ಬೆಸ್ಟ್: ತಜ್ಞರ ಸಲಹೆ