10 Signs Of High Cholesterol : ಇಂದಿನ ಕಾಲದಲ್ಲಿ ದೇಹದಲ್ಲಿ LDL ಅಂದರೆ, ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಈ ಸಮಸ್ಯೆಯು ಪ್ರಪಂಚದಾದ್ಯಂತ ಬಹುತೇಕ ಎಲ್ಲಾ ವಯೋಮಾನದ ಜನರ ಮೇಲೆ ವೇಗವಾಗಿ ಪರಿಣಾಮ ಬೀರುತ್ತಿದೆ. ಜೀವನಶೈಲಿಯ ಭಾಗವೆಂದು ಪರಿಗಣಿಸಲಾದ ಆಹಾರ ಮತ್ತು ವ್ಯಾಯಾಮಕ್ಕೆ ಸಂಬಂಧಿಸಿದ ಅಶಿಸ್ತಿನ ಮತ್ತು ಅಸಮತೋಲಿತ ಅಭ್ಯಾಸಗಳು ಇದಕ್ಕೆ ಕಾರಣ ಎಂದು ತಜ್ಞರು ತಿಳಿಸುತ್ತಾರೆ.
ತಜ್ಞರ ಹೇಳುವ ಪ್ರಕಾರ, ಅಧಿಕ ಕೊಲೆಸ್ಟ್ರಾಲ್ ಸೈಲೆಂಟ್ ಕಿಲ್ಲರ್ ಆಗಿದೆ. ಕೊಲೆಸ್ಟ್ರಾಲ್ನಿಂದಾಗಿ ಹೃದಯ ಸಂಬಂಧಿತ ಸಮಸ್ಯೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ಬೊಜ್ಜು ಕೂಡ ಹೆಚ್ಚಾಗುತ್ತದೆ. ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಜೊತೆಗೆ ಅನೇಕ ಅಪಾಯಕಾರಿ ಕಾಯಿಲೆಗಳ ಅಪಾಯ ಸೃಷ್ಟಿಸುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಿಸಲು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಕೊಲೆಸ್ಟ್ರಾಲ್ ಎಂದರೇನು? ಅಧಿಕ ಕೊಲೆಸ್ಟ್ರಾಲ್‌ನ 10 ಚಿಹ್ನೆಗಳು ಯಾವುವು ಎಂಬುದನ್ನು ತಿಳಿಯೋಣ.
ಕೊಲೆಸ್ಟ್ರಾಲ್ ಎಂದರೇನು ? ಕೊಲೆಸ್ಟ್ರಾಲ್ ಜೀವಕೋಶದ ಪೊರೆಗಳಲ್ಲಿ ಕಂಡುಬರುವ ಕೊಬ್ಬಿನ, ಎಣ್ಣೆಯುಕ್ತ ಸ್ಟೀರಾಯ್ಡ್ ಆಗಿದೆ. ಇದು ರಕ್ತನಾಳಗಳಲ್ಲಿ ಪ್ಲೇಕ್ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದು ರಕ್ತ ಪೂರೈಕೆಯಲ್ಲಿ ಅಡಚಣೆ ಉಂಟುಮಾಡುತ್ತದೆ. ಅಧಿಕ ರಕ್ತದೊತ್ತಡ, ಹೃದಯಾಘಾತ, ಮೆದುಳಿನ ಪಾರ್ಶ್ವವಾಯು ಸೇರಿದಂತೆ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಜೀವನಶೈಲಿ ಹಾಗೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳುವ ಮೂಲಕ ಹೆಚ್ಚಿನ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು ಎಂದು ವೈದ್ಯಕೀಯ ತಜ್ಞರು ಸಲಹೆ ನೀಡುತ್ತಾರೆ.
ಅಧಿಕ ಕೊಲೆಸ್ಟ್ರಾಲ್‌ನ ಹತ್ತು ಚಿಹ್ನೆಗಳೇನು ?
- ಎದೆ ನೋವು : ಎದೆಯಲ್ಲಿ ನೋವು, ಅಸ್ವಸ್ಥತೆ, ವಿಶೇಷವಾಗಿ ವ್ಯಾಯಾಮ ಮಾಡುವಾಗ ಇದು ಕಂಡುಬರುತ್ತದೆ.
- ಕಾಲು ನೋವು & ಸೆಳೆತ : ಕಾಲುಗಳಲ್ಲಿ ನೋವು, ಸೆಳೆತ, ವಿಶೇಷವಾಗಿ ದೀರ್ಘಕಾಲ ನಡೆಯುವಾಗ ಇಲ್ಲವೇ ನಿಂತಾಗ.
- ಚರ್ಮದ ಮೇಲೆ ಬದಲಾವಣೆ : ಚರ್ಮದ ಮೇಲೆ ಹಳದಿ ನಿಕ್ಷೇಪಗಳಂತೆ ಇರುವ ಇದನ್ನು ಕ್ಸಾಂಥೋಮಾಸ್ ಎಂದು ಕರೆಯಲಾಗುತ್ತದೆ. ವಿಶೇಷವಾಗಿ ಕಣ್ಣುಗಳು, ಮೊಣಕಾಲುಗಳು ಮತ್ತು ಮೊಣಕೈಗಳ ಸುತ್ತಲೂ ಕಂಡುಬರುತ್ತದೆ.
- ತಲೆತಿರುಗುವಿಕೆ : ಆಗಾಗ್ಗೆ ಸಂಭವಿಸುವ ತಲೆತಿರುಗುವಿಕೆ ಇಲ್ಲವೇ ಮೈಗ್ರೇನ್ ಲಕ್ಷಣ ವಿರುತ್ತದೆ.
- ಉಸಿರಾಟದ ತೊಂದರೆ : ಎದೆ ನೋವಿನೊಂದಿಗೆ ಉಸಿರಾಟದ ತೊಂದರೆ ಕಾಣಿಕೊಳ್ಳುತ್ತದೆ
- ಆಯಾಸ : ತುಂಬಾ ದಣಿದ ಭಾವನೆಯಾಗುತ್ತದೆ.
- ಉಬ್ಬುವುದು : ಊಟ ಮಾಡಿದ ಬಳಿಕ ಉಬ್ಬುವುದು, ಅಜೀರ್ಣ ಅಥವಾ ನೋವು ಅನುಭವಿಸುವುದು.
- ಹೃದಯಾಘಾತದ ಚಿಹ್ನೆ : ಹಠಾತ್ ಸಮತೋಲನ ನಷ್ಟ, ಉಸಿರಾಟದ ತೊಂದರೆ, ವಾಕರಿಕೆ ಮತ್ತು ಎದೆ ನೋವು ಉಂಟಾಗುತ್ತದೆ.
- ದವಡೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
- ಕತ್ತಿನ ಹಿಂಭಾಗದಲ್ಲಿ ನೋವು ಬರುತ್ತದೆ.
ಯಾರಿಗೆ ಅಧಿಕ ಕೊಲೆಸ್ಟ್ರಾಲ್ ಬರುವ ಅಪಾಯವಿದೆ ಗೊತ್ತಾ ?
- ಹೆಚ್ಚಿನ ಕೊಲೆಸ್ಟ್ರಾಲ್‌ನವರ ಕುಟುಂಬದ ಇತಿಹಾಸ
- ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರು
- ಸ್ಯಾಚುರೇಟೆಡ್, ಟ್ರಾನ್ಸ್ ಕೊಬ್ಬುಗಳಿರುವ ಹೆಚ್ಚಿನ ಆಹಾರ ಸೇವಿಸುವುದು
- ಹೆಚ್ಚು ಮದ್ಯಪಾನ ಮಾಡುವುದು
- ಧೂಮಪಾನ
- ನಿಯಮಿತವಾಗಿ ವ್ಯಾಯಾಮ ಮಾಡದಿರುವುದು
medlineplus.gov ಪ್ರಕಾರ, ಕೊಲೆಸ್ಟ್ರಾಲ್ ನಿಯಂತ್ರಿಸಲು ಬೆಳಗ್ಗೆ ಈ ಆಹಾರಗಳನ್ನು ತಿನ್ನುವುದು ತುಂಬಾ ಪ್ರಯೋಜನಕಾರಿಯಾಗಿದೆ.
ವಾಲ್ನಟ್ : ವಾಲ್ನಟ್ ಹಲವು ಪೋಷಕಾಂಶಗಳನ್ನು ಹೊಂದಿದೆ. ನೀವು ಪ್ರತಿದಿನ ಉಪಾಹಾರಕ್ಕಾಗಿ ಕೆಲವು ವಾಲ್ನಟ್ಗಳನ್ನು ಸೇವಿಸಿದರೆ, ಅದು ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯಕವಾಗಬಹುದು. ಇದು ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಬಾದಾಮಿ : ಬಾದಾಮಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುತ್ತದೆ. ಹೆಲ್ತ್ ಹಾರ್ವರ್ಡ್ ಎಜುಕೇಶನ್ ಹಾಗೂ ಇತರ ಹಲವಾರು ಅಧ್ಯಯನಗಳಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ, ಬೆಳಗ್ಗೆ ಬಾದಾಮಿ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಬಹುದು. ಅವುಗಳನ್ನು ಬೆಳಗ್ಗೆ ತಿನ್ನುವುದು ಉತ್ತಮ ಎಂದು ತಿಳಿದುಬಂದಿದೆ.
ಆಲಿವ್ ಎಣ್ಣೆ : ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ಬೇಯಿಸಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಎಣ್ಣೆ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಅಗಸೆ ಬೀಜಗಳು : ಅನೇಕ ಪೋಷಕಾಂಶಗಳ ಜೊತೆಗೆ, ಅಗಸೆ ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಮೂರು ತಿಂಗಳ ಕಾಲ ನಿರಂತರವಾಗಿ ಬೆಳಿಗ್ಗೆ ಅಗಸೆ ಬೀಜದ ಪುಡಿಯನ್ನು ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು ಹೇಳುತ್ತಾರೆ.
ಬೆಳಗ್ಗೆ ವಾಕಿಂಗ್, ವ್ಯಾಯಾಮ : ಬೆಳಗ್ಗೆ ವಾಕಿಂಗ್, ಯೋಗ ಹಾಗೂ ವ್ಯಾಯಾಮವು ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ನಿಯಮಿತ ಏರೋಬಿಕ್ ವ್ಯಾಯಾಮವು ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಯೋಗ ನಮ್ಮ ಆರೋಗ್ಯವನ್ನೂ ರಕ್ಷಿಸುತ್ತದೆ.
ಕಿತ್ತಳೆ ಹಣ್ಣಿ ರಸ : ರಾಷ್ಟ್ರೀಯ ಆರೋಗ್ಯ ಸೇವೆ ಮತ್ತು ವೈದ್ಯಕೀಯ ತಜ್ಞರು ಹೇಳುವಂತೆ, ಬೆಳಗ್ಗೆ ಎದ್ದ ಕೂಡಲೇ ವಿಟಮಿನ್ ಸಿ ಸಮೃದ್ಧವಾಗಿರುವ ಒಂದು ಗ್ಲಾಸ್ ಕಿತ್ತಳೆ ರಸ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಬಹುದು. ಕಿತ್ತಳೆ ಹಣ್ಣಿನಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡುವ ಫ್ಲೇವನಾಯ್ಡ್ಗಳು ಇವೆ ಎಂದು ತಜ್ಞರು ತಿಳಿಸುತ್ತಾರೆ.
ಹೆಚ್ಚಿನ ಮಾಹಿತಿಗೆ ಈ ವೆಬ್ಸೈಟ್ಗಳನ್ನು ವೀಕ್ಷಿಸಬಹುದು:
- https://www.nhs.uk/conditions/high-cholesterol/how-to-lower-your-cholesterol/
- https://pubmed.ncbi.nlm.nih.gov/16954359/
- https://medlineplus.gov/howtolowercholesterolwithdiet.html
- https://www.bhf.org.uk/informationsupport/risk-factors/high-cholesterol
- https://www.nhs.uk/conditions/high-cholesterol/#:~:text=High%20cholesterol%20does%20not%20usually,it%20from%20a%20blood%20test.
- https://www.cdc.gov/cholesterol/about/index.html
ಓದುಗರಿಗೆ ವಿಶೇಷ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.