ಲಖನೌ(ಉತ್ತರ ಪ್ರದೇಶ): "ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಯಾವುದೇ ಪಕ್ಷಗಳಿಗೆ ಮಾರಕ. ಆ ಪಕ್ಷವು ಇಬ್ಬಗೆ ನೀತಿ ಮತ್ತು ಜಾತಿವಾದಿಯಾಗಿದೆ" ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.
"ಕಾಂಗ್ರೆಸ್ ಪ್ರಬಲವಿರುವ ಮತ್ತು ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಿಎಸ್ಪಿ, ಅದರ ಕಾರ್ಯಕರ್ತರ ಮೇಲೆ ದ್ವೇಷ, ಜಾತಿವಾದಿ ಮನೋಭಾವ ಹೊಂದಿದೆ. ಅದು ದುರ್ಬಲವಾಗಿರುವ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಮಾತ್ರ ಬಿಎಸ್ಪಿಯ ಬೆಂಬಲ ಪಡೆಯಲು ಬಯಸುತ್ತದೆ" ಎಂದು ಅವರು ಟೀಕಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಯಾವತಿ, "ಕಾಂಗ್ರೆಸ್ ತನ್ನ ಅನುಕೂಲಕ್ಕಾಗಿ ಬಿಎಸ್ಪಿ ಜೊತೆ ಕೈಜೋಡಿಸುವ ಹೇಳಿಕೆಯು, ಜನರ ದಾರಿ ತಪ್ಪಿಸಲು ಪ್ರಯತ್ನವಾಗಿದೆ. ಒಂದೆಡೆ, ಮೈತ್ರಿ ಎನ್ನುತ್ತಾ ಇನ್ನೊಂದೆಡೆ, ದ್ವಂದ್ವ ನಿಲುವು, ಜಾತಿವಾದಿತನ ಅನುಸರಿಸುವುದು ಅದರ ಬೂಟಾಟಿಕೆ ಅಲ್ಲದೇ ಇನ್ನೇನು?" ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಜೊತೆ ಮೈತ್ರಿ ಹಾನಿಕಾರಕ: "ಕಾಂಗ್ರೆಸ್ ಜೊತೆಗಿನ ಹಿಂದಿನ ಮೈತ್ರಿಗಳು ಬಿಎಸ್ಪಿಗೆ ಹಾನಿ ಉಂಟುಮಾಡಿವೆ. ಅದರ ಜೊತೆ ಕೈ ಜೋಡಿಸಿದ್ದರಿಂದ ನಮ್ಮ ಮೂಲ ಮತಗಳು ಅವರೆಡೆ ವರ್ಗವಾದವೇ ಹೊರತು, ಅದರ ಮತಗಳು ನಮಗೆ ಬರಲಿಲ್ಲ. ಇದರ ಪರಿಣಾಮ, ನಮ್ಮ ಪಕ್ಷವು ನಷ್ಟ ಅನುಭವಿಸಿತು" ಎಂದು ದೂರಿದ್ದಾರೆ.
ಬಿಜೆಪಿ ವಿರುದ್ಧವೂ ಟೀಕಿಸಿರುವ ಮಾಯಾವತಿ, "ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು, ಡಾ.ಬಿ.ಆರ್.ಅಂಬೇಡ್ಕರ್, ಬಿಎಸ್ಪಿ, ಅದರ ನಾಯಕತ್ವ, ದಲಿತ- ಬಹುಜನರು ಮತ್ತು ಮೀಸಲಾತಿ ವ್ಯವಸ್ಥೆಯನ್ನು ವಿರೋಧಿಸುತ್ತಾ ಬಂದಿದ್ದಾರೆ. ಇವರ ನೀತಿಗಳು ದೇಶದ ಸಾಂವಿಧಾನಿಕ ಗುರಿಯಾದ ಸಮಾನತೆ ಮತ್ತು ಅಭಿವೃದ್ಧಿಗೆ ಅಡ್ಡಿಯಾಗಿವೆ. ಇದು ಕಳವಳಕಾರಿ ಸಂಗತಿ" ಎಂದು ಆಪಾದಿಸಿದ್ದಾರೆ.
ಮಾಯಾವತಿ ಹೊಗಳಿದ್ದ ರಾಹುಲ್ ಗಾಂಧಿ: ರಾಯ್ಬರೇಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ವಿಪಕ್ಷ ನಾಯಕ ರಾಹುಲ್ ಗಾಂಧಿ ದಲಿತ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಳ್ಳಬೇಕಿತ್ತು ಎಂದು ಪ್ರಸ್ತಾಪಿಸಿದ್ದರು.
"ಭಾರತದ ರಾಜಕೀಯದಲ್ಲಿ ಬಿಎಸ್ಪಿ ಸಂಸ್ಥಾಪಕ ಕಾನ್ಶಿ ರಾಮ್ ಅವರ ಪಾತ್ರ ದೊಡ್ಡದಿದೆ. ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಮಾಯಾವತಿ ಅವರು ದೊಡ್ಡ ಸೌಧ ನಿರ್ಮಿಸಿದರು. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಬಿಎಸ್ಪಿ ಇಂಡಿಯಾ ಕೂಟ ಸೇರಬೇಕಿತ್ತು. ಹಾಗಾಗಿದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಡೆಯನ್ನು ಕಟ್ಟಿಹಾಕಬಹುದಾಗಿತ್ತು" ಎಂದು ಹೇಳಿದ್ದರು.
ಇದಕ್ಕೆ ವಿರುದ್ಧ ಮಾಯಾವತಿ ಅವರು ಎಕ್ಸ್ ಖಾತೆಯಲ್ಲಿ ಟೀಕಿಸಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಎನ್ಡಿಎ ಮುಖ್ಯಮಂತ್ರಿಗಳ ಸಭೆ; ಪ್ರಧಾನಿ ಮೋದಿ, ಅಮಿತ್ ಶಾ ಭಾಗಿ