ಲಖನೌ, ಉತ್ತರಪ್ರದೇಶ: ಇತ್ತೀಚಿನ ದಿನಗಳಲ್ಲಿ ಆಹಾರ ಕಲಬೆರಕೆ ದೊಡ್ಡದಾಗಿ ಸದ್ದು ಮಾಡುತ್ತಿದೆ. ಕೆಲ ವಸ್ತುಗಳು ಆರೋಗ್ಯಕ್ಕೆ ಅಪಾಯಕಾರಿ ಆಗಿರುವ ಹಿನ್ನೆಲೆಯಲ್ಲಿ ಸರ್ಕಾರಗಳು ಅವುಗಳ ಮೇಲೆ ನಿಷೇಧ ಹೇರಿದ್ದು ಇದೆ. ಈ ನಡುವೆ ಆಹಾರ ಪದಾರ್ಥಗಳಲ್ಲಿ ಕಬ್ಬಿಣದ ಸರಳುಗಳು, ಮೊಳೆಗಳು ಇತ್ಯಾದಿಗಳು ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗುವಂತೆ ಮಾಡುತ್ತಿವೆ.
ಈ ಮಾತಿಗೆ ಇಂಬು ನೀಡುವಂತೆ ಗೋಮತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೇಕರಿಯೊಂದರಲ್ಲಿ ಕ್ರೀಮ್ ರೋಲ್ ನಲ್ಲಿ ಕಬ್ಬಿಣದ ರಾಡ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯೊಬ್ಬಳು ತಮ್ಮ ತಂದೆ ಬೇಕರಿಯೊಂದರಿಂದ ತಂದಿದ್ದ ಕ್ರೀಮ್ ರೋಲ್ ತಿನ್ನುತ್ತಿದ್ದಳು, ಈ ವೇಳೆ ವಸಡಿನಿಂದ ರಕ್ತಬರಲು ಆರಂಭಿಸಿದೆ. ತಕ್ಷಣ ಬಾಲಕಿ ಈ ವಿಚಾರವನ್ನು ತನ್ನ ತಂದೆಗೆ ತಿಳಿಸಿದ್ದಾಳೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬಾಲಕಿ ತಂದೆ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದಾರೆ. ಈ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಏನಿದು ಘಟನೆ?: ನವೆಂಬರ್ 21 ರಂದು ಗೋಮ್ತಿನಗರದ ಪತ್ರಕರ್‌ಪುರಂನಲ್ಲಿರುವ ಬೇಕರಿಯಿಂದ 4 ಕ್ರೀಮ್ ರೋಲ್‌ಗಳನ್ನು ಖರೀದಿಸಿದ್ದರು. ಅವರ 7 ವರ್ಷದ ಮಗಳು ರಾತ್ರಿ ಮನೆಯಲ್ಲಿ ಕ್ರೀಮ್ ರೋಲ್ ತಿಂದಾಗ ಆಕೆಯ ಬಾಯಿಂದ ರಕ್ತ ಬರಲಾರಂಭಿಸಿತು. ಇದರಿಂದ ಹೆದರಿದ ಬಾಲಕಿ ಅಳಲು ಆರಂಭಿಸಿದ್ದಾಳೆ. ಆಗ ಕುಟುಂಬಸ್ಥರು ಪರಿಶೀಲಿಸಿದಾಗ ಕ್ರೀಮ್ ರೋಲ್ ನಲ್ಲಿ ಕಬ್ಬಿಣದ ರಾಡ್ ಇರುವುದು ಕಂಡುಬಂತು ಎಂದು ಹಜರತ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ವೈಶಾಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಕ್ರಾಂತಿವೀರ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಪೊಲೀಸ್ ಅಧಿಕಾರಿ ಹೇಳಿದ್ದಿಷ್ಟು: ದೂರಿನ ಆಧಾರದ ಮೇಲೆ ಪ್ರಕರಣದ ತನಿಖೆ ಪ್ರಾರಂಭಿಸಲಾಗಿದೆ. ಸಂತ್ರಸ್ತೆಯ ತಂದೆ ದೂರಿನ ಜೊತೆಗೆ ಕಬ್ಬಿಣದ ರಾಡ್‌ನೊಂದಿಗೆ ಕ್ರೀಮ್ ರೋಲ್ ಪೊಲೀಸರಿಗೆ ನೀಡಿದ್ದಾರೆ. ಬೇಕರಿ ಅಂಗಡಿ ಮಾಲೀಕರಿಗೆ ಸಮನ್ಸ್ ನೀಡಲಾಗಿದೆ. ಪ್ರಕರಣದ ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಬೇಕರಿ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇನ್ಸ್ಪೆಕ್ಟರ್ ಗೋಮತಿನಗರ ರಾಜೇಶ್ ಕುಮಾರ್ ತ್ರಿಪಾಠಿ ತಿಳಿಸಿದ್ದಾರೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಅವರು ಮಾಹಿತಿ ಒದಗಿಸಿದ್ದಾರೆ.