ಯೂರಿಕ್ ಆ್ಯಸಿಡ್. ಇದು ರಕ್ತದಲ್ಲಿನ ಪ್ಯೂರಿನ್‌ಗಳ ವಿಭಜನೆಯಿಂದ ಉತ್ಪತ್ತಿಯಾಗುವ ರಾಸಾಯನಿಕ. ಸರಳವಾಗಿ ಹೇಳುವುದಾದರೆ, ಯೂರಿಕ್ ಆ್ಯಸಿಡ್ ರಕ್ತದಲ್ಲಿ ಕಂಡುಬರುವ ತ್ಯಾಜ್ಯ ಉತ್ಪನ್ನ. ಇದು ಸಾಮಾನ್ಯವಾಗಿ ಮೂತ್ರದ ಮೂಲಕ ಹೊರಹೋಗುತ್ತದೆ. ಮೂತ್ರದ ಮೂಲಕ ಹೊರಹಾಕಲು ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ, ದೇಹದಲ್ಲಿ ಸಂಗ್ರಹವಾಗುತ್ತದೆ ಮತ್ತು ಸಮಸ್ಯೆ ಉದ್ಭವವಾಗುತ್ತದೆ. ಇದನ್ನು ಹೈಪರ್ಯುರಿಸೆಮಿಯಾ ಎಂದು ಕರೆಯಲಾಗುತ್ತದೆ.
ದೇಹದಲ್ಲಿ ಯೂರಿಕ್ ಆ್ಯಸಿಡ್ ಹೆಚ್ಚಾಗುವುದರಿಂದ ಊತ, ನೋವು, ಕೀಲು ಸಮಸ್ಯೆಗಳು ಮತ್ತು ಮೂತ್ರಪಿಂಡದ ಕಲ್ಲುಗಳಂತಹ ವಿವಿಧ ಸಮಸ್ಯೆಗಳು ಬಾಧಿಸುತ್ತವೆ. ಯೂರಿಕ್ ಆ್ಯಸಿಡ್ ಕಡಿಮೆ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಔಷಧಿಗಳು ಲಭ್ಯವಿದ್ದರೂ, ಆಯುರ್ವೇದ ಔಷಧಿಗಳಿಂದ ನೈಸರ್ಗಿಕವಾಗಿ ಕಡಿಮೆ ಮಾಡಬಹುದು. ಈಗ ಯೂರಿಕ್ ಆ್ಯಸಿಡ್ ನಿಯಂತ್ರಿಸಲು ಸಹಾಯ ಮಾಡುವ ಕೆಲವು ಎಲೆಗಳ ಬಗ್ಗೆ ತಿಳಿಯೋಣ.
ಆಯುರ್ವೇದದ ಪ್ರಕಾರ, ಸೂಚಿಸಲಾದ ಕೆಲವು ಎಲೆಗಳನ್ನು ತಿನ್ನುವುದರಿಂದ ದೇಹದಲ್ಲಿನ ತ್ಯಾಜ್ಯ ಉತ್ಪನ್ನವಾದ ಯೂರಿಕ್ ಆ್ಯಸಿಡ್ ನಿಯಂತ್ರಣದಲ್ಲಿರುತ್ತದೆ. ಈ ಎಲೆಗಳು ಯೂರಿಕ್ ಆ್ಯಸಿಡ್ ಕಡಿಮೆ ಮಾಡುವುದು ಮಾತ್ರವಲ್ಲದೆ ದೇಹದಲ್ಲಿನ ವಿವಿಧ ಸಮಸ್ಯೆಗಳನ್ನೂ ಸಹ ತೊಲಗಿಸುತ್ತದೆ.
1. ತುಳಸಿ:ಭಾರತೀಯರು ಪವಿತ್ರ ಸಸ್ಯವೆಂದು ಪರಿಗಣಿಸುವ ತುಳಸಿಯು ಅದರ ಔಷಧೀಯ ಗುಣಗಳಿಗೆ ಹೆಸರುವಾಸಿ. ಇದು ಯೂರಿಕ್ ಆ್ಯಸಿಡ್ ಕಡಿಮೆ ಮಾಡುವ ಆ್ಯಂಟಿ ಇನ್ಫ್ಲಮಟರಿ, ಆ್ಯಂಟಿ ಆಕ್ಸಿಡೆಂಟ್ ಲಕ್ಷಣಗಳನ್ನು ಹೊಂದಿರುತ್ತವೆ. ತುಳಸಿ ಎಲೆಗಳನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ದೇಹದಲ್ಲಿ ಯೂರಿಕ್ ಆ್ಯಸಿಡ್ ಸಂಗ್ರಹವಾಗುವುದನ್ನು ಇದು ತಡೆಯುತ್ತದೆ.
2. ಬೇವಿನ ಎಲೆಗಳು:ದೇಹದಿಂದ ಯೂರಿಕ್ ಆ್ಯಸಿಡ್ ಹೊರಹಾಕಲು ಬೇವು ಉತ್ತಮ ಔಷಧ. ರಕ್ತ ಶುದ್ಧೀಕರಣದಲ್ಲೂ ಉತ್ತಮ ಪಾತ್ರವಹಿಸುತ್ತವೆ. ಬೇವಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದೆ. ಇದು ಯೂರಿಕ್ ಆ್ಯಸಿಡ್ ಮತ್ತು ದೇಹದಲ್ಲಿ ಸಂಗ್ರಹವಾಗಿರುವ ಇತರ ವಿಷಕಾರಿ ವಸ್ತುಗಳನ್ನು ಹೊರಹಾಕುವ ಶಕ್ತಿ ಹೊಂದಿದೆ.