Symptoms Of Prediabetes :ಪ್ರಸ್ತುತ ದಿನಗಳಲ್ಲಿ ಜಗತ್ತನ್ನು ಬೆಚ್ಚಿ ಬೀಳಿಸುತ್ತಿರುವ ಕಾಯಿಲೆಗಳಲ್ಲಿ ಒಂದು ಎಂದರೆ ಅದು ಮಧುಮೇಹ. ಬದಲಾದ ಜೀವನಶೈಲಿ, ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ ಮತ್ತು ವಂಶವಾಹಿಗಳಂತಹ ವಿವಿಧ ಕಾರಣಗಳಿಂದ ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಂದೊಮ್ಮೆ ಮಧುಮೇಹ ಬಂದರೆ ದಿನವೂ ಔಷಧ ಸೇವಿಸಿ ಮುನ್ನೆಚ್ಚರಿಕೆ ವಹಿಸದೇ ಬೇರೆ ದಾರಿಯೇ ಇಲ್ಲ ಎಂಬಂತಾಗಿದೆ.
ಅಂದ ಹಾಗೆ ಮಧುಮೇಹ - ಶುಗರ್ ಬರುವ ಮುನ್ನ ಯಾವ ಲಕ್ಷಣಗಳಿವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇದರಿಂದ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗಬಹುದು ಮತ್ತು ಹೃದ್ರೋಗ, ಕಿಡ್ನಿ ಸಮಸ್ಯೆ, ದೃಷ್ಟಿ ಕುಂಠಿತ ಮುಂತಾದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಅಂತಾರೆ ತಜ್ಞರು. ಮಧುಮೇಹದ ಮೊದಲು ನಮ್ಮ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ.
ಮಧುಮೇಹಕ್ಕೂ ಮುನ್ನ: ಕೆಲವು ರೋಗಲಕ್ಷಣಗಳನ್ನು ಹೊಂದಿರುವ ಮಧುಮೇಹವನ್ನೇ 'ಪ್ರಿ-ಡಯಾಬಿಟಿಸ್' ಎಂದು ಕರೆಯಲಾಗುತ್ತದೆ. ಇದು ಹೃದಯರಕ್ತನಾಳದ ಕಾಯಿಲೆ ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಪ್ರಿ-ಡಯಾಬಿಟಿಸ್ ಇರುವವರಲ್ಲಿ ಗ್ಲೂಕೋಸ್ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ,
ಪದೇ ಪದೆ ಮೂತ್ರ ವಿಸರ್ಜನೆ: ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಮಧುಮೇಹದ ಮೊದಲ ಲಕ್ಷಣ. ರಾತ್ರಿ ವೇಳೆಯೂ ಪದೇ ಪದೆ ಮೂತ್ರ ವಿಸರ್ಜನೆ ಮಾಡಬೇಕಾದರೆ ನಿಮಗೆ ಪ್ರಿ - ಡಯಾಬಿಟೀಸ್ ಇದೆ ಎಂದು ತಿಳಿದುಕೊಳ್ಳಬೇಕು ಎನ್ನುತ್ತಾರೆ ಡಾ.ರವಿಶಂಕರ್.
ಅತಿಯಾದ ಬಾಯಾರಿಕೆ: ಆಗಾಗ ನೀರು ಕುಡಿದರೂ ಬಾಯಾರಿಕೆಯಾಗುತ್ತಿದ್ದರೆ ನಿಮಗೆ ಮಧುಮೇಹವಿದೆ ಎಂದು ತಿಳಿಯಬೇಕು. ರಕ್ತದಲ್ಲಿ ಅಧಿಕ ಸಕ್ಕರೆಯ ಮಟ್ಟವನ್ನು ಉಂಟುಮಾಡುತ್ತದೆ. ಇದು ಆಗಾಗ್ಗೆ ಮೂತ್ರ ವಿಸರ್ಜನೆಗೆ ಕಾರಣವಾಗುತ್ತದೆ. ಇದರಿಂದ ದಾಹ ಹೆಚ್ಚುತ್ತದೆ ಎನ್ನುತ್ತಾರೆ ಡಾಕ್ಟರ್ಸ್.
ಅತಿಯಾದ ಹಸಿವು: ಸಾಕಷ್ಟು ಆಹಾರವನ್ನು ಸೇವಿಸಿದ ನಂತರವೂ ನಿಮಗೆ ಹಸಿವಾದರೆ, ಅದು ಮಧುಮೇಹ ಪೂರ್ವದ ಸಂಕೇತವೆಂದು ಗುರುತಿಸಬೇಕು. ದೇಹಕ್ಕೆ ಸಾಕಷ್ಟು ಗ್ಲೂಕೋಸ್ ಸಿಗದ ಕಾರಣ ಹಸಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.