ಹೈದರಾಬಾದ್: ಪಾರಿವಾಳದ ಗರಿ ಮತ್ತು ತ್ಯಾಜ್ಯಕ್ಕೆ ದೀರ್ಘಕಾಲ ತೆರೆದುಕೊಂಡ ಬಾಲಕನೊಬ್ಬ ಪ್ರಾಣಾಪಾಯ ಉಂಟುಮಾಡಬಲ್ಲ ಅಲರ್ಜಿಗೆ ಒಳಗಾಗಿದ್ದಾನೆ. 11 ವರ್ಷದ ದೆಹಲಿಯ ಈ ಬಾಲಕ ಸಾಮಾನ್ಯ ಕೆಮ್ಮಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪರೀಕ್ಷೆಗೆ ಒಳಪಡಿಸಿದಾಗ ಅಪಾಯಕಾರಿ ಅಲರ್ಜಿ ವರದಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆತನ ಉಸಿರಾಟ ಕೆಟ್ಟದಾಗಿದ್ದು, ಆರೋಗ್ಯ ಕ್ಷೀಣಿಸುತ್ತಿದೆ. ಹೈಪರ್ಸೆನ್ಸಿಟಿವ್ ನ್ಯೂಮೊನಿಟಿಸ್ (ಎಚ್‌ಪಿ) ಉಂಟಾಗಿದೆ. ಪಾರಿವಾಳಗಳಿಂದಾಗುವ ಅಲರ್ಜಿ ಇದಾಗಿದ್ದು, ತಕ್ಷಣಕ್ಕೆ ಆರೋಗ್ಯದ ತುರ್ತು ಪರಿಸ್ಥಿತಿ ಏರ್ಪಟ್ಟಿದೆ ಎಂದು ಮಕ್ಕಳ ತುರ್ತು ನಿಗಾ ಘಟಕದ ಸಹ ನಿರ್ದೇಶಕ ಡಾ.ಧೀರೆನ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಬಾಲಕನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತನಿಗೆ ಶ್ವಾಸಕೋಶ ಉರಿಯೂತವಿದ್ದು, ಎಚ್‌ಪಿ ಸೂಚನೆಗಳು ಕಾಣಿಸುತ್ತಿದ್ದವು. ಎದೆಯ ಭಾಗದಲ್ಲಿ ಕಪ್ಪಗಿನ ಪ್ರದೇಶ ಬಿಳಿಯಾಗಿ ಕಾಣುತ್ತಿತ್ತು ಎಂದು ಹೇಳಿದ್ದಾರೆ.
ಎಚ್‌ಪಿ ಎಂಬುದು ದೀರ್ಘಾವಧಿಯ ಶ್ವಾಸಕೋಶ ಸಮಸ್ಯೆ. ಈ ಪರಿಸ್ಥಿತಿಯಲ್ಲಿ ಶ್ವಾಸಕೋಶದಲ್ಲಿ ಗಾಯವಾಗಿ, ಉಸಿರಾಡುವುದು ಸವಾಲಾಗುತ್ತದೆ. ಈ ರೀತಿಯ ಪರಿಸ್ಥಿತಿ ವಯಸ್ಕರಲ್ಲೂ ಕಾಣಬಹುದಾಗಿದ್ದು, ಮಕ್ಕಳಲ್ಲಿ ವಿರಳ. ಮಕ್ಕಳಲ್ಲಿ ಲಕ್ಷದಲ್ಲಿ 2 ರಿಂದ 4 ವರದಿಗಳಾಗುತ್ತದೆ.
ಸದ್ಯ ಬಾಲಕನಿಗೆ ಸ್ಟಿರಿಯಾಡ್ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ, ಉಸಿರಾಟಕ್ಕೆ ಸಹಾಯವಾಗಲು ಹೈ-ಪ್ಲೋ ಆಕ್ಸಿಜನ್ ಥೆರಪಿ ನೀಡಲಾಗುತ್ತಿದೆ. ಇದು ಶ್ವಾಸಕೋಶ ಉರಿಯೂತ ಕಡಿಮೆ ಮಾಡಲಿದ್ದು ಉಸಿರಾಟವನ್ನು ಸಾಮಾನ್ಯ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಸದ್ಯ ಬಾಲಕ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಪಕ್ಷಿಗಳ ಹಿಕ್ಕೆ ಮತ್ತು ಗರಿಗಳಿಂದಾಗುವ ಆರೋಗ್ಯ ಹಾನಿ ಮತ್ತು ಪರಿಸರ ಪ್ರಚೋದಕದ ಬಗ್ಗೆ ಶಿಕ್ಷಣ ನೀಡುವುದು ಅಗತ್ಯ. ಪಾರಿವಾಳ ಮತ್ತು ಕೋಳಿಗಳು ಯಾವುದೇ ಹಾನಿ ಮಾಡುವುದಿಲ್ಲ ಎಂದು ತೋರಿದರೂ ಅವುಗಳೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. (ಪಿಟಿಐ)
ಇದನ್ನೂ ಓದಿ: ಡೆಂಗ್ಯೂವಿನಿಂದ ಮಿದುಳಿನ ನರಮಂಡಲದ ಮೇಲೆ ಗಂಭೀರ ಪರಿಣಾಮ: ತಜ್ಞರು