ಪುಣೆ: ಬಿಸಿಲಿನ ತಾಪ ಹೆಚ್ಚಳದಿಂದಾಗಿ ವಯಸ್ಕರಲ್ಲಿ ಮೂತ್ರನಾಳದ ಸೋಂಕು ಮತ್ತು ಮೂತ್ರಪಿಂಡದ ಕಲ್ಲುಗಳ (ಕಿಡ್ನಿ ಸ್ಟೋನ್) ಸಮಸ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ವೈದ್ಯರು ಸೋಮವಾರ ವರದಿ ಮಾಡಿದ್ದಾರೆ. ಕಿಡ್ನಿ ಸ್ಟೋನ್ ಇವು ಖನಿಜ ಮತ್ತು ಆಮ್ಲ ಲವಣಗಳ ಸಣ್ಣ, ಗಟ್ಟಿಯಾದ ನಿಕ್ಷೇಪಗಳಾಗಿವೆ. ಮೂತ್ರವು ಸಾಂದ್ರೀಕೃತವಾದಾಗ ಈ ಕಲ್ಲುಗಳು ರೂಪುಗೊಳ್ಳುತ್ತವೆ. ಕಿಡ್ನಿ ಸ್ಟೋನ್ ಅಪಾಯ ಕಡಿಮೆ ಮಾಡಲು ಸಾಕಷ್ಟು ನೀರು ಕುಡಿಯುವ ಮೂಲಕ ಹೈಡ್ರೇಟೆಡ್ ಆಗಿರುವುದು ಮುಖ್ಯವಾಗಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
"ಬೇಸಿಗೆಯಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಶಾಖದಿಂದಾಗಿ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ಈ ಸಮಸ್ಯೆ ಉಂಟಾಗುತ್ತದೆ. ಪ್ರತಿದಿನ 2 ರಿಂದ 3 ರೋಗಿಗಳು ಹೊಟ್ಟೆ ನೋವಿನ ಕಾರಣದಿಂದ ಚಿಕಿತ್ಸೆಗಾಗಿ ಬರುತ್ತಿದ್ದಾರೆ" ಎಂದು ಪುಣೆಯ ಅಪೊಲೊ ಸ್ಪೆಕ್ಟ್ರಾ ಮೂತ್ರಶಾಸ್ತ್ರಜ್ಞ ಡಾ. ಪವನ್ ರಂಗದಾಳೆ ಐಎಎನ್ಎಸ್ಗೆ ತಿಳಿಸಿದರು.
"ಬಿಸಿ ವಾತಾವರಣದಲ್ಲಿ ನಿಯಮಿತವಾಗಿ ನೀರು ಕುಡಿಯಬೇಕು ಮತ್ತು ಮೂತ್ರದ ಬಣ್ಣವು ಶುದ್ಧ ನೀರಿನಂತೆ ಇರಬೇಕು. ಹಳದಿ ಮೂತ್ರವು ನಿರ್ಜಲೀಕರಣವನ್ನು ಸೂಚಿಸುತ್ತದೆ" ಎಂದು ವೈದ್ಯರು ಹೇಳಿದರು. ನಿರಂತರ ಬೆವರುವಿಕೆಯಿಂದ ಉಂಟಾಗುವ ದ್ರವ ನಷ್ಟವನ್ನು ಸಾಕಷ್ಟು ಜಲಸಂಚಯನದಿಂದ ಸರಿದೂಗಿಸಬೇಕು. ಇಲ್ಲದಿದ್ದರೆ ಮೂತ್ರಪಿಂಡದಲ್ಲಿ ಮೂತ್ರದ ಸಾಂದ್ರೀಕರಣವಾಗುತ್ತದೆ ಮತ್ತು ಇದರಿಂದ ಕಿಡ್ನಿ ಸ್ಟೋನ್ ಉಂಟಾಗುತ್ತವೆ ಎಂದು ಅವರು ಸಲಹೆ ನೀಡಿದರು.