ನವದೆಹಲಿ:ತೂಕ ನಷ್ಟ, ರಕ್ತದೊತ್ತಡ ಮತ್ತು ಉತ್ತಮ ಕೊಬ್ಬಿನ ನಿಯಂತ್ರಣಕ್ಕೆ ಇಂಟರ್ಮಿಟ್ಟೆಂಟ್ ಫಾಸ್ಟಿಂಗ್ (ಮಧ್ಯಂತರ ಉಪವಾಸ) ಸಾಕಷ್ಟು ಜನಪ್ರಿಯವಾಗಿದೆ. ಆದರೆ, ಈ ಜನಪ್ರಿಯ ಡಯಟ್ ಮಹಿಳೆಯರಿಗೆ ಉತ್ತಮವಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಈ ಮಧ್ಯಂತರ ಉಪವಾಸ ಅನುಕರಿಸುವ ಪುರುಷರಿಗೆ ಹೋಲಿಕೆ ಮಾಡಿದಾಗ ಮಹಿಳೆಯರಲ್ಲಿ ಇದರ ಆರೋಗ್ಯ ಪರಿಣಾಮ ವಿಭಿನ್ನವಾಗಿದೆ ಎಂದು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷಿಯನ್ ಅಂಡ್ ಡಯಾಬೀಟಿಕ್ಸ್ನ ಸೇವಾ ಮುಖ್ಯಸ್ಥ ಎಡ್ವಿನ್ ರಾಜ್ ತಿಳಿಸಿದ್ದಾರೆ.
ಮಹಿಳೆಯರ ಹಾರ್ಮೋನ್ಗಳಾದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ಗಳು ಈ ಉಪವಾಸ ಸಂದರ್ಭದಲ್ಲಿ ಪ್ರಭಾವಕ್ಕೆ ಒಳಗಾಗುತ್ತದೆ. ಇದು ಋತುಚಕ್ರ ಮತ್ತು ಫಲವತ್ತತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದಿದ್ದಾರೆ. ಋತುಚಕ್ರದ ಸಮಯದಲ್ಲಿ ಹಾರ್ಮೋನ್ಗಳ ಏರಿಳಿತ ಕಾಣಬಹುದು. ಇದನ್ನು ಮತ್ತೊಂದು ಹಾರ್ಮೋನ್ ಆದ ಜಿಎನ್ಆರ್ಎಚ್ ನಿಯಂತ್ರಿಸುತ್ತದೆ. ಮಹಿಳೆಯರು ಉಪವಾಸ ಮಾಡಿದಾಗ ಜಿಎನ್ಆರ್ಎಚ್ ಹಾರ್ಮೋನ್ಗೆ ಅಡ್ಡಿಯಾಗುತ್ತದೆ. ಇದರಿಂದ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಈ ಈಸ್ಟ್ರೋಜನ್ ಮತ್ತು ಪ್ರೊಜೆಸ್ಟರಾನ್ ಹಾರ್ಮೋನ್ ಅಡ್ಡಿಯಿಂದ ಮಹಿಳೆಯರಲ್ಲಿ ತಲೆನೋವು, ನಿದ್ರೆ ಭಂಗ ಸೇರಿದಂತೆ ಇನ್ನಿತರ ಸಮಸ್ಯೆ ಕಾಣಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಮಧ್ಯಂತರ ಉಪವಾಸವೂ ಮಹಿಳೆಯರ ಆರೋಗ್ಯದ ಮೇಲೆ ಅಡ್ಡಿ ಉಂಟು ಮಾಡುತ್ತದೆ. ಗರ್ಭಿಣಿ ಅಥವಾ ಹಾಲುಣಿಸುವವರು, ಗರ್ಭಿಣಿಯಾಗಲು ಪ್ರಯತ್ನಿಸುವವರಿಗೆ ಇದರಿಂದ ತೊಂದರೆಯಾಗುತ್ತದೆ. ಈ ಹಿನ್ನೆಲೆ ಗರ್ಭಿಣಿಯಾಗಲು ಪ್ರಯತ್ನಿಸುತ್ತಿರುವವರು ಉಪವಾಸ ತಪ್ಪಿಸಬೇಕು. ಇದು ಅಂಡಾಣು ದರವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ಅಥವಾ ಹಾಲುಣಿಸುವವರು ಕೂಡ ಈ ಉಪವಾಸ ಮಾಡದಿರುವುದು ಒಳಿತು. ಕಾರಣ ಇವರ ದೇಹಕ್ಕೆ ಹೆಚ್ಚಿನ ಶಕ್ತಿ ಬೇಕಾಗುತ್ತದೆ.