ನವದೆಹಲಿ: ಭಾರತ ಇಂದು ಅನಾರೋಗ್ಯದಿಂದ ಆರೋಗ್ಯದೆಡೆಗೆ ಪರಿವರ್ತನೆಯ ಪ್ರಯಾಣ ಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ ಭುವನೇಶ್ವರ ಕಲಿತಾ ತಿಳಿಸಿದ್ದಾರೆ. ಅಸೋಚಮ್ ರಾಷ್ಟ್ರೀಯ ಸಿಎಸ್ಆರ್ ಮಂಡಳಿಯಲ್ಲಿ ಅನಾರೋಗ್ಯದಿಂದ ಆರೋಗ್ಯದೆಡೆಗೆ ಎಂಬ ಜಾಗೃತಿ ಸಮಾವೇಶದ ಎರಡನೇ ಆವೃತ್ತಿಯಲ್ಲಿ ಸೋಮವಾರ ಪಾಲ್ಗೊಂಡು ಮಾತನಾಡಿದ ಅವರು, ಆರೋಗ್ಯ ಮತ್ತು ಶುಚಿತ್ವದ ಪರಿಶೀಲನೆಯಲ್ಲಿ ಭಾರತ ಗಮನಾರ್ಹ ವಿಕಸನ ಕಂಡಿದೆ ಎಂದು ಅಭಿಪ್ರಾಯಪಟ್ಟರು.
ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ 1,000 ಜನಸಂಖ್ಯೆಗೆ ಒಬ್ಬ ವೈದ್ಯ ಇರಬೇಕು ಎಂಬ ಮಾರ್ಗಸೂಚಿಯನ್ನು ಹೊಂದಿದೆ. ನಾವು ಇಂದು 900 ಜನರಿಗೆ ಒಬ್ಬ ವೈದ್ಯರನ್ನು ಹೊಂದುವ ಮೂಲಕ ಈ ಮಾರ್ಗಸೂಚಿಯಲ್ಲಿ ಸುಧಾರಣೆ ಸಾಧಿಸಿದ್ದೇವೆ. ಆರೋಗ್ಯ ಮತ್ತು ಶುಚಿತ್ವವು ನೈತಿಕ ಅಗತ್ಯತೆಯಾಗಿದ್ದು, ಇದು ಆರ್ಥಿಕ ಅವಶ್ಯಕತೆಯಲ್ಲ ಎಂದು ಅವರು ತಿಳಿಸಿದರು.
ಆರೋಗ್ಯ ಮತ್ತು ಶುಚಿತ್ವ ಎಂಬುದು ಆರೋಗ್ಯಯುತ ಸಮಾಜ ನಿರ್ಮಾಣದ ಎರಡು ಸ್ಥಂಭಗಳು. ಈ ಪ್ರಯಾಣ ಪ್ರಯಾಸದಾಯಕವಾಗಿದ್ದರೂ, ಸ್ಪೂರ್ತಿದಾಯಕವಾಗಿದೆ. ಸೋಂಕಿನ ವಿರುದ್ಧ ಹೋರಾಟದಿಂದ ಅನೇಕ ಆರೋಗ್ಯದ ಮುನ್ನೆಚ್ಚರಿಕೆ ವಹಿಸುವವರೆಗೆ ದೇಶದ ಸ್ವಾಸ್ಥ್ಯ ಕಾಪಾಡುವಲ್ಲಿ ಗಣನೀಯ ಸಾಧನೆ ಮಾಡಿದೆ. ಕಳೆದ ದಶಕದಲ್ಲಿ ನಾವು ತಾಯಂದಿರ ಮರಣ ದರ ಮತ್ತು ಶಿಶು ಮರಣ ದರ ಹಾಗೂ ಐದು ವರ್ಷದೊಳಗಿನ ಮಕ್ಕಳ ಸಾವಿನ ದರದಲ್ಲೂ ಇಳಿಕೆ ಸಾಧಿಸಿದ್ದೇವೆ.