ನವದೆಹಲಿ:ಭಾರತೀಯ ಯುವ ಜನತೆಯಲ್ಲಿ ಇತ್ತೀಚಿನ ದಿನಮಾನಗಳಲ್ಲಿ ಕೊಲೊನ್ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ ಪ್ರಕರಣಗಳು ಏರಿಕೆ ಕಾಣುತ್ತಿವೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಕಾರಣವೇನು?: ತಡವಾದ ಪತ್ತೆ ಕಾರ್ಯ, ಪರೀಕ್ಷೆಗೆ ಒಳಪಡದೇ ಇರುವುದು ಹಾಗು ಪಾಶ್ಚಿಮಾತ್ಯ ಆಹಾರ ಅಭ್ಯಾಸ ಕ್ರಮಗಳು ಕ್ಯಾನ್ಸರ್ ಪ್ರಕರಣಗಳು ಹೆಚ್ಚಲು ಕಾರಣ. ಪಾಶ್ಚಿಮಾತ್ಯ ಆಹಾರಗಳು ಹೆಚ್ಚು ಸಂಸ್ಕರಿಸಿದ್ದು, ಕ್ಯಾಲೊರಿ ಸಮೃದ್ದವಾಗಿವೆ ಎಂಬುದನ್ನು ಗಮನಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಕೋವಿಡ್ ಕಾರ್ಯಪಡೆಯ ಸಹ ಮುಖ್ಯಸ್ಥರಾಗಿರುವ ಡಾ.ರಾಜೀವ್ ಜಯದೇವನ್, "ಭಾರತದಲ್ಲಿ ಬಹುತೇಕ ಮಂದಿಯಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಅಂತಿಮ ಹಂತದಲ್ಲಿ ಪತ್ತೆಯಾಗುತ್ತಿದೆ. ಈ ರೋಗದ ಕುರಿತು ಹೆಚ್ಚಿನ ತಿಳುವಳಿಕೆ ಮತ್ತು ರೋಗ ಪತ್ತೆಯ ಸೌಲಭ್ಯ, ಜಾಗೃತಿ ಇಲ್ಲದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ" ಎಂದು ತಿಳಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳಂತೆ ಭಾರತದಲ್ಲಿ ಈ ನಿರ್ದಿಷ್ಟ ಕ್ಯಾನ್ಸರ್ ಪತ್ತೆ ಕಾರ್ಯ ವಿಧಾನ ನಡೆಸುವ ವೈದ್ಯರಿಲ್ಲ. ಪರೀಕ್ಷಾ ಸೌಲಭ್ಯವೂ ಇಲ್ಲ. ಬಹುತೇಕರು ಈ ರೋಗದ ಪ್ರಮುಖ ಲಕ್ಷಣಗಳನ್ನು ನಿರ್ಲಕ್ಷಿಸುತ್ತಾರೆ. ರಕ್ತಸ್ರಾವದಂತಹ ಪ್ರಮುಖ ಲಕ್ಷಣವನ್ನು ಹೆಮೊರಾಯ್ಡ್ ಅಥವಾ ಪೈಲ್ಸ್ ಎಂದು ತಪ್ಪಾಗಿ ಗುರುತಿಸುವುದೂ ಉಂಟು. ಇಂಥ ಸಂದರ್ಭಗಳಲ್ಲಿ ಅನೇಕ ಸಲ ಚಿಕಿತ್ಸೆಗೆ ಸ್ಥಳೀಯ ವೈದ್ಯರ ಬಳಿ ಹೋಗುತ್ತಾರೆ. ಇದರಿಂದ ಕ್ಯಾನ್ಸರ್ ಅಂತಿಮ ಹಂತದಲ್ಲಿ ಗಮನಕ್ಕೆ ಬರುತ್ತದೆ ಎಂದು ಕೊಚ್ಚಿ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ರಾಜೀವ್ ಮಾಹಿತಿ ನೀಡಿದರು.
2023ರಲ್ಲಿ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆ ತೋರಿಸಿದಂತೆ 50 ವರ್ಷ ಮೇಲ್ಪಟ್ಟವರಲ್ಲಿ ಈ ಕ್ಯಾನ್ಸರ್ ಪತ್ತೆಯಾಗುತ್ತಿತ್ತು. ಇದೀಗ 31ರಿಂದ 40 ವರ್ಷದ ಯುವ ವಯಸ್ಕರಲ್ಲೇ ಕಂಡುಬರುತ್ತಿದೆ ಎಂಬುದು ಆತಂಕದ ವಿಚಾರ ಎನ್ನುತ್ತಾರೆ ತಜ್ಞರು.