HMPV Virus Children: ಪ್ರಸ್ತುತ ಚೀನಾ ಹಾಗೂ ವಿವಿಧ ದೇಶಗಳಲ್ಲಿ ಹರಡುತ್ತಿರುವ HMP ವೈರಸ್ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ ಬಗ್ಗೆ ಹೆಚ್ಚು ಚಿಂತಿಸುವ ಅಥವಾ ಭಯಪಡುವ ಅಗತ್ಯವಿಲ್ಲ ಎಂದು ತಜ್ಞ ವೈದ್ಯರು ತಿಳಿಸುತ್ತಾರೆ. ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಇದರಿಂದ ಮಕ್ಕಳ ವಿಷಯದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ. ಮಕ್ಕಳ ತಜ್ಞ ಡಾ.ಶ್ರೀನಿವಾಸ್ ಕಲ್ಯಾಣಿ ಅವರು ಪ್ರತಿಕ್ರಿಯಿಸಿ, HMP ವೈರಸ್ ಈ ಕಾಯಿಲೆಯಿಂದ ಪಾರಾಗಲು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ವಹಿಸಬಹುದು ಎಂಬುದರ ಕುರಿತು ವಿವರಿಸಿದ್ದಾರೆ.
"HMP ವೈರಸ್ ಮೊದಲ ವಾರದಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹೆಚ್ಚು ವೇಗವಾಗಿ ಹರಡುತ್ತದೆ. ಹಾಗಾಗಿ ಮನೆಯಲ್ಲಿ ಯಾರಿಗಾದರೂ ಕೆಮ್ಮು, ಶೀತ, ಜ್ವರ, ಸುಸ್ತು ಆಗುವಂತಹ ಲಕ್ಷಣಗಳು ಕಂಡುಬಂದರೆ, ಅವರು ಶಿಶುಗಳಿಂದ ದೂರವಿರಬೇಕು (ಕನಿಷ್ಠ ಆರು ಅಡಿ) ಮತ್ತು ನೀವು ಮತ್ತು ಮಕ್ಕಳನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಿದರೆ ಇನ್ನೂ ಉತ್ತಮ. ಅಲ್ಲದೆ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯದೆ ಶಿಶುಗಳನ್ನು ಮುಟ್ಟಬೇಡಿ. ಮಕ್ಕಳು ದಿನಕ್ಕೆ ಅರ್ಧ ಗಂಟೆಯವರೆಗೆ (ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರ ನಡುವೆ) ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳಬೇಕು. ಪರಿಣಾಮವಾಗಿ, ವಿಟಮಿನ್ ಡಿ ಉತ್ಪಾದನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಎಲ್ಲಾ ಲಸಿಕೆಗಳನ್ನು ಹಾಕಿಸುವುದರ ಜೊತೆಗೆ ಪೋಷಣೆ ಮಾಡಬೇಕು''
-ಡಾ.ಶ್ರೀನಿವಾಸ ಕಲ್ಯಾಣಿ, ಮಕ್ಕಳ ತಜ್ಞ
''ಶಿಶುಗಳಿಗೆ ಎದೆಹಾಲು ನೀಡಬೇಕು. ಮಕ್ಕಳಲ್ಲಿ ಶೀತ ಲಕ್ಷಣಗಳು ಕಂಡುಬಂದರೆ ಭಯಪಡುವ ಅಗತ್ಯವಿಲ್ಲ. ಆದರೆ, ವ್ಯಕ್ತಿ ವೇಗವಾಗಿ ಉಸಿರಾಡುತ್ತಿದ್ದರೆ, ತೀವ್ರ ಜ್ವರ ಕಾಣಿಸಿಕೊಂಡರೆ, ಹಾಲು ಕುಡಿಯದೇ ಇದ್ದರೆ, ನಡುಗುತ್ತಿದ್ದರೆ, ಸುಸ್ತಾಗಿದ್ದರೆ, ಅತಿಯಾಗಿ ಕೆಮ್ಮುತ್ತಿದ್ದರೆ, ಪಾರ್ಶ್ವವಾಯು ಕಾಣಿಸಿಕೊಂಡರೆ ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ನೀವೇ ನಿರ್ಧರಿಸಿ ಸ್ವಯಂ- ಔಷಧಗಳನ್ನು ತೆಗೆದುಕೊಳ್ಳಬೇಡಿ. ಅದರಲ್ಲೂ ಸ್ಟೀರಾಯ್ಡ್ ಮತ್ತು ಆ್ಯಂಟಿಬಯೋಟಿಕ್ ಔಷಧಗಳನ್ನು ಬಳಸಬಾರದು. ಇತ್ತೀಚಿನ ದಿನಗಳಲ್ಲಿ, ಅನೇಕ ವೈದ್ಯರು ಆಡಿಯೋ ಅಥವಾ ವಿಡಿಯೋ ಕರೆಗಳ ಮೂಲಕ ಫೋನ್ ಮೂಲಕ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತಿದ್ದಾರೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಸಾಧ್ಯವಾಗದಿದ್ದರೆ, ವೈದ್ಯರನ್ನು ಫೋನ್ ಮೂಲಕ ಸಂಪರ್ಕಿಸಬೇಕು. ಇದರಿಂದ ಮಕ್ಕಳನ್ನು ಹೊರಗಡೆ ಕರೆದುಕೊಂಡು ಹೋಗದೇ ಮನೆಯಲ್ಲೇ ಇದ್ದು ವೈದ್ಯಕೀಯ ಸಲಹೆ ಪಡೆಯಬಹುದು ಎಂದು ಮಕ್ಕಳ ತಜ್ಞ ಡಾ.ಶ್ರೀನಿವಾಸ ಕಲ್ಯಾಣಿ ತಿಳಿಸಿದರು.
ಕೋವಿಡ್-19 ಜೊತೆ ಹೋಲಿಕೆ:
ಕೆಲವು ವಿಷಯಗಳಲ್ಲಿ HMP ವೈರಸ್ ಮತ್ತು ಕೋವಿಡ್-19 ತಳಿಯಾದ SARS-CoV-2 ಅನ್ನು ಹೋಲುತ್ತದೆ. ಈ ಎರಡೂ ಜನರಲ್ಲಿ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತವೆ. ವಿಶೇಷವಾಗಿ ಚಿಕ್ಕ ಮಕ್ಕಳು, ವೃದ್ಧರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ಜನರು ಹೆಚ್ಚಿನ ಅಪಾಯದಲ್ಲಿದ್ದಾರೆ. ಇವೆರಡರ ಗುಣಲಕ್ಷಣಗಳು ಬಹುತೇಕ ಒಂದೇ ಎಂದು ಹೇಳಲಾಗುತ್ತದೆ. ಜ್ವರ, ಕೆಮ್ಮು, ಮೂಗು ಕಟ್ಟುವಿಕೆ ಮತ್ತು ಆಯಾಸದ ಲಕ್ಷಣವು ಕೋವಿಡ್‌ನಂತೆ ಕಂಡುಬರುತ್ತದೆ ಎಂದು ಡಾ.ಶ್ರೀನಿವಾಸ್ ಕಲ್ಯಾಣಿ ತಿಳಿಸುತ್ತಾರೆ.
ಕೆಮ್ಮುವಿಕೆ, ಸೀನುವಿಕೆ ಮತ್ತು ನಿಕಟ ಸಂಪರ್ಕದ ಮೂಲಕ ಇವೆರಡೂ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ವೈರಸ್ ಹರಡಿದ ವಸ್ತುಗಳನ್ನು ಮುಟ್ಟಿದ ಬಳಿಕ, ಅದೇ ಕೈಗಳಿಂದ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿದರೂ ಸೋಂಕು ತಗುಲುತ್ತದೆ ಎಂದು ವೈದ್ಯರು ಹೇಳಿದರು.
ಭಯ ಪಡಬೇಡಿ: ಎಚ್‌ಎಂಪಿ ವೈರಸ್‌ನಲ್ಲಿ ಎ1, ಎ2, ಬಿ1 ಮತ್ತು ಬಿ2 ವಿಧಗಳಿವೆ. ಇದು ಸಾಮಾನ್ಯವಾಗಿದ್ದರೆ ಏನೂ ಅಪಾಯಕಾರಿ ಅಲ್ಲ. ಆದರೆ, ಇದು ವಂಶವಾಹಿಯಾಗಿ ಬದಲಾಗಿದೆಯೇ ಹಾಗೂ ಇದರ ತೀವ್ರ ಹೇಗಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಚೀನಾದಲ್ಲಿ ಯಾವುದೂ ಅಪಾಯಕಾರಿಯಾಗಿ ಪರಿಣಮಿಸಿಲ್ಲ ಎನ್ನುತ್ತಿದೆ ಅಲ್ಲಿನ ಸರ್ಕಾರ. ಹಾಗಾಗಿ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ವೈದ್ಯರು ವಿವರಿಸಿದ್ದಾರೆ.
ಪ್ರಸ್ತುತ ಯಾವುದೇ ಲಸಿಕೆ ಇಲ್ಲ: HMP ವೈರಸ್ಗೆ ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ. ಇದಕ್ಕೆ ಆ್ಯಂಟಿವೈರಲ್ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ. ಆದರೆ, ಕೆಲವು ಮುನ್ನೆಚ್ಚರಿಕೆಗಳೊಂದಿಗೆ ಇದನ್ನು ಹರಡುವುದನ್ನು ತಡೆಯಬಹುದು ಎಂದು ಡಾ.ಶ್ರೀನಿವಾಸ್ ಕಲ್ಯಾಣಿ ತಿಳಿಸುತ್ತಾರೆ.
HMP ವೈರಸ್ ತಡೆಗಟ್ಟುವುದು ಹೇಗೆ?
- HMP ವೈರಸ್ ಸೋಂಕಿತ ಜನರೊಂದಿಗೆ ಕೈಕುಲುಕುವುದನ್ನು ತಪ್ಪಿಸಿ.
- ಅಶುಚಿಯಾದ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಬಾರದು.
- ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನಿನಿಂದ ಆಗಾಗ್ಗೆ ಕೈಗಳನ್ನು ತೊಳೆಯಿರಿ.
- ಸೋಂಕಿತ ಜನರಿಂದ ದೂರವಿರುವುದು ಉತ್ತಮ.
- ಶೀತದ ಲಕ್ಷಣಗಳು ಇರುವವರು ಮಾಸ್ಕ್ ಧರಿಸಬೇಕು.
- ನೀವು ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ ಹಾಗೂ ಮೂಗನ್ನು ಮುಚ್ಚಿಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ವೀಕ್ಷಿಸಿ:
https://my.clevelandclinic.org/health/diseases/22443-human-metapneumovirus-hmpv
ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಚೀನಾದಲ್ಲಿ ವೇಗವಾಗಿ ಹರಡುತ್ತಿರುವ ಎಚ್ಎಂಪಿವಿ ವೈರಸ್: ಈ ವೈರಸ್‌ನಿಂದ ರಕ್ಷಿಸಿಕೊಳ್ಳೋದು ಹೇಗೆ?
ದೇಶದಲ್ಲಿ 5ಕ್ಕೆ ಏರಿಕೆ ಕಂಡ ಎಚ್ಎಂಪಿವಿ ಸೋಂಕಿತ ಪ್ರಕರಣಗಳ ಸಂಖ್ಯೆ: ಇದನ್ನು ತಡೆಗಟ್ಟೋದು ಹೇಗೆ?